ದೆಹಲಿ ಆರೋಗ್ಯ ಸಚಿವಗೆ ಕೊರೊನಾ!
ನವದೆಹಲಿ: ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ಗೆ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಸದ್ಯ ದೆಹಲಿ, ಮುಂಬೈ ಮಹಾನಗರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ 55 ವರ್ಷದ ಸಚಿವರನ್ನು ಮಂಗಳವಾರ ಮುಂಜಾನೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕರೆತರಲಾಗಿತ್ತು. ಅಲ್ಲದೆ ಮೊನ್ನೆ ಬೆಳಗ್ಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅದರ ವರದಿಯಲ್ಲಿ ಕೊರೊನಾ ನೆಗೆಟಿವ್ ಅಂತ ಬಂದಿತ್ತು. ಆದರೆ ಸಚಿವರಿಗೆ ಜ್ವರ ಕಡಿಯಾಗದ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ ಆಗಿ 24 ಗಂಟೆಯ ನಂತರ ನಿನ್ನೆ ಮತ್ತೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದಿದೆ ಅಂತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಸಚಿವರ ಆರೋಗ್ಯ ಸ್ಥಿರವಾಗಿದ್ದು, ಆಕ್ಸಿಜನ್ ಸಹಾಯ ನೀಡಲಾಗಿದೆ ಎಂದು ಆರ್ಜಿಎಸ್ಎಸ್ಹೆಚ್ ನ ವೈದ್ಯರು ಹೇಳಿದ್ದಾರೆ. ಭಾನುವಾರ ಸತ್ಯೇಂದರ್ ಜೈನ್ ಅವರು ಕೇಂದ್ರ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಅರವಿಂದ್ ಕೇಜ್ರಿವಾಲ್ ಹಾಗೂ ಮನಿಶ್ ಸಿಸೋಡಿಯಾರ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೊರೊನಾ ವೈರಸ್ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆ ಬಳಿಕ ಅಂದರೆ ಸೋಮವಾರ ಜ್ವರ ಹಾಗೂ ಉಸಿರಾಟದ ತೊಂದರೆ ಕಂಡುಬಂದಿದ್ದರಿಂದ ಮುಂಗಳವಾರ ಮುಂಜಾನೆ ಜೈನ್ ಅವರು ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾದರು. ಇತ್ತ ದೆಹಲಿಯ ಎಎಪಿ ಶಾಸಕಿ ಅತಿಶಿ(39) ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅತಿಶಿಗೆ ಮಂಗಳವಾರ ಕಫ ಹಾಗೂ ಜ್ವರ ಕಾಣಿಸಿಕೊಂಡಿದ್ದು, ಕೊರೊನಾ ಟೆಸ್ಟ್ಗೆ ಕಳುಹಿಸಲಾಗಿತ್ತು. ಅದರ ವರದಿ ನಿನ್ನೆ ಬಂದಿದ್ದು ಪಾಸಿಟಿವ್ ಇರುವುದು ದೃಢಪಟ್ಟಿದೆ. ಸದ್ಯ ಅವರನ್ನು ಹೋಂಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಅತಿಶಿ ಕೊರೊನಾ ವೈರಸ್ ಕಾಣಿಸಿಕೊಂಡು ಮೂರನೇ ಶಾಸಕಿಯಾಗಿದ್ದಾರೆ. ಈ ಹಿಂದೆ ತಮ್ಮ ಪಕ್ಷದ ವಿಶೇಷ್ ರವಿ ಹಾಗೂ ರಾಜ್ ಕುಮಾರ್ ಆನಂದ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ನಿನ್ನೆ ಬೆಳಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಅತಿಶಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಅವರು ಆದಷ್ಟು ಬೇಗ ಕೊರೊನಾ ವೈರಸ್ ಮಹಾಮಾರಿಯಿಂದ ಗುಣಮುಖರಾಗಿ ಬರುತ್ತಾರೆ ಎಂಬ ನಂಬಿಕೆಯಿದೆ ಎಂದು ಬರೆದುಕೊಂಡಿದ್ದಾರೆ.