ತಮಿಳ್ನಾಡಿನ 4 ಜಿಲ್ಲೆಗಳು ಸಂಪೂರ್ಣ ಲಾಕ್ ಡೌನ್!

ಚೆನ್ನೈ: ತಮಿಳುನಾಡಿನಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮಿತಿಮೀರಿದ್ದು ಸರಕಾರ ಸೋಂಕು ನಿಯಂತ್ರಣಕ್ಕೆ ತರಲಾರದೆ ಕಂಗಾಲಾಗಿದೆ. ಹೀಗಾಗಿ ರಾಜ್ಯದ ನಾಲ್ಕು ಜಿಲ್ಲೆಗಳನ್ನು ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಜೂನ್ 19ರಿಂದ 30ರ ತನಕ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಆಗಿರುತ್ತದೆ. ಚೆನ್ನೈ, ತಿರುವಳ್ಳೂರು, ಕಾಂಚಿಪುರಂ, ಚೆಂಗಲ್‍ಪಟ್ಟು ಲಾಕ್ ಡೌನ್ ಘೋಷಣೆಯಾದ ಜಿಲ್ಲೆಗಳು.
ಸರಕಾರ ಇಂದು ಈ ಕುರಿತು ಆದೇಶ ಹೊರಡಿಸಿದ್ದು ಅಗತ್ಯ ಸೇವೆಗಳನ್ನು ಮಾರಾಟ ಮಾಡುವ ಅಂಗಡಿಗಳು ಮಾತ್ರ ಬಾಗಿಲು ತೆರೆಯಬಹುದಾಗಿದೆ. ಈ ನಾಲ್ಕು ಜಿಲ್ಲೆಯಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ತನಕ ಮಾತ್ರ ಅಂಗಡಿಗಳನ್ನು ತೆರೆಯಬಹುದಾಗಿದೆ ಎಂದು ಸರ್ಕಾರ ಹೇಳಿದೆ. ಪೊಲೀಸರು ತಂಡಗಳನ್ನು ರಚನೆ ಮಾಡಿಕೊಂಡು ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲಿದ್ದಾರೆ. ದಿನಸಿ ಅಂಗಡಿ, ತರಕಾರಿ ಅಂಗಡಿ, ಪೆಟ್ರೋಲ್ ಬಂಕ್ ಮುಂತಾದ ಅಂಗಡಿಗಳು 6 ರಿಂದ 2 ಗಂಟೆ ತನಕ ಮಾತ್ರ ತೆರೆಯಬಹುದಾಗಿದೆ. ಖಾಸಗಿ ಕಾರು ಮತ್ತು ಬೈಕ್‍ನಲ್ಲಿ ಜನರು 2 ಕಿ. ಮೀ. ತನಕ ಮಾತ್ರ ಸಂಚಾರ ನಡೆಸಬಹುದಾಗಿದೆ. 4 ಜಿಲ್ಲೆಗಳಲ್ಲಿ ವೈದ್ಯಕೀಯ ಸೇವೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ತಮಿಳುನಾಡಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 44,661. ಚೆನ್ನೈ ನಗರದಲ್ಲಿ 31,896 ಪ್ರಕರಣಗಳಿವೆ.

Leave a Reply

Your email address will not be published. Required fields are marked *