ಡೆಲಿವರಿ ಬಾಯ್‍ನ ಕಣ್ಣೀರಿಗೆ ಮರುಗಿದ ದರೋಡೆಕೋರರು!

ಇಸ್ಲಾಮಾಬಾದ್: ಡೆಲಿವರಿ ಬಾಯ್‍ನ ಕಣ್ಣೀರಿಗೆ ಮರುಗಿದ ದರೋಡೆಕೋರರು ಕಿತ್ತುಕೊಂಡ ವಸ್ತುಗಳನ್ನು ವಾಪಸ್ ನೀಡಿರುವ ಘಟನೆ ಇಸ್ಲಾಮಾಬಾದ್‍ನಲ್ಲಿ ನಡೆದಿದೆ. ಸದ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಕೆಲವರು ಇದೊಂದು ಪೂರ್ವಯೋಜಿತ ನಾಟಕ ಎಂದು ಬಣ್ಣಿಸಿದ್ದಾರೆ.
ವಿಡಿಯೋದಲ್ಲಿ ದರೋಡೆಕೋರರಿಬ್ಬರು ಬೈಕಿನಲ್ಲಿ ಬಂದು ಓರ್ವ ಯುವಕನ ಬಳಿ ದರೋಡೆ ಮಾಡುವ ದೃಶ್ಯ ಸೆರೆಯಾಗಿದೆ. ಕೇವಲ 59 ಸೆಕೆಂಡ್ ಇರುವ ಈ ವಿಡಿಯೋದ ಮೊದಲಿಗೆ ಫುಡ್ ಡೆಲಿವರಿ ಯುವಕನೊಬ್ಬ ಅಂಗಡಿಯಿಂದ ತನ್ನ ಬೈಕ್ ಬಳಿ ಬರುತ್ತಾನೆ. ಈ ವೇಳೆ ಅಲ್ಲಿಗೆ ಬೈಕಿನಲ್ಲಿ ಬಂದ ಇಬ್ಬರು ದರೋಡೆಕೋರರು. ಆತನ ಬಳಿ ಬಂದು ಹೆದರಿಸಿ ಅವನ ಜೇಬಿನಲ್ಲಿದ್ದ ಹಣ ಮತ್ತು ವಸ್ತುಗಳನ್ನು ಕಿತ್ತುಕೊಳ್ಳುತ್ತಾರೆ. ಈ ವೇಳೆ ಕಷ್ಟಪಟ್ಟು ದುಡಿದ ಹಣ ಹೀಗೆ ಕಿತ್ತುಕೊಂಡರಲ್ಲ ಎಂದು ಯುವಕ ಕಣ್ಣೀರು ಹಾಕುತ್ತಾನೆ. ಯುವಕ ಕಣ್ಣೀರು ಹಾಕಿದ ಕೂಡಲೇ ಇದನ್ನು ಕಂಡ ದರೋಡೆಕೋರರು ಮನಸ್ಸನ್ನು ಚೇಂಜ್ ಮಾಡಿಕೊಳ್ಳುತ್ತಾರೆ. ಯುವಕ ಕಣ್ಣೀರು ನೋಡಿ ಕರಗಿದ ಕಳ್ಳರು ಕಿತ್ತುಕೊಂಡ ಹಣ ಮತ್ತು ವಸ್ತುಗಳನ್ನು ವಾಪಸ್ ನೀಡುತ್ತಾರೆ. ಜೊತೆಗೆ ಅವನಿಗೆ ಶೇಕ್ ಹ್ಯಾಂಡ್ ನೀಡಿ ತಬ್ಬಿಕೊಂಡು ಸಮಾಧಾನ ಮಾಡುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಈಗ ಈ ವಿಡಿಯೋ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದ್ದು, ದರೋಡೆಕೋರರ ಒಳ್ಳೆಯ ತನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ವಿಡಿಯೋ ನೋಡಿದ ನಂತರ ಮಾನವೀಯತೆ ಎಂಬುದು ಇನ್ನೂ ಬದುಕಿದೆ ಎಂದು ಅನಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಹೆಚ್ಚಿನವರು ಇದು ಕೇವಲ ಪಬ್ಲಿಸಿಟಿ ಸ್ಟಂಟ್ ಎಂದು ಕಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *