ಡಿವೈಎಫ್ಐ ರಾಷ್ಟ್ರಾಧ್ಯಕ್ಷನ ಜೊತೆ ಕೇರಳ ಸಿಎಂ ಪಿಣರಾಯಿ ಮಗಳ ಮದುವೆ!

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹಿರಿಯ ಪುತ್ರಿ ವೀಣಾ ತೈಕ್ಕಂಡಿಯಿಲ್ ಅವರ ವಿವಾಹ ಡಿವೈಎಫ್ಐ ರಾಷ್ಟ್ರಾಧ್ಯಕ್ಷ ಪಿ.ಎ. ಮುಹಮ್ಮದ್ ರಿಯಾಸ್ ಅವರೊಂದಿಗೆ ನಿಶ್ಚಯವಾಗಿದ್ದು ಇದೇ ಬರುವ ಜೂನ್ 15ರಂದು ತಿರುವನಂತಪುರದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಇಬ್ಬರಿಗೂ ಇದು ಎರಡನೇ ವಿವಾಹವಾಗಿರಲಿದೆ.
ಐಟಿ ಉದ್ಯಮಿಯಾಗಿರುವ ವೀಣಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವಿವಾಹ ಕಾರ್ಯಕ್ರಮದಲ್ಲಿ ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರಷ್ಟೇ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಮುಹಮ್ಮದ್ ರಿಯಾಸ್ ಹಿಂದೆ ಡಿವೈಎಫ್ಐ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿದ್ದರು. 2017ರಿಂದ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಗೋಹತ್ಯೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಸ್ತೆಯಲ್ಲಿ ಬೀಫ್ ಅಡುಗೆ ಮಾಡುವ ಮೂಲಕ ವಿಶಿಷ್ಟ ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದಿದ್ದರು. ಪಿಣರಾಯಿ ಪುತ್ರಿ ಆರು ವರ್ಷ ಹಿಂದೆ ಎಕ್ಸಲಾಜಿಕ್ ಎಂಬ ಐಟಿ ಕಂಪೆನಿ ಹುಟ್ಟುಹಾಕಿದ್ದರು.