ಡಿಎಂಕೆ ಶಾಸಕ ಕೊರೊನಾಗೆ ಬಲಿ!

ಚೆನ್ನೈ: ತಮಿಳುನಾಡಿನ ಡಿಎಂಕೆ ಹಿರಿಯ ಶಾಸಕ ಜೆ.ಅನ್ಬಳಗನ್ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಮುಂಜಾನೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 62 ವರ್ಷದ ಡಿಎಂಕೆ ಶಾಸಕ ಜೆ.ಅನ್ಬಳಗನ್ ಅವರನ್ನು ಜೂನ್ 2 ರಂದು ಡಾ.ರೇಲಾ ಇನ್ಸ್ಟಿಟ್ಯೂಟ್ ಮತ್ತು ಮೆಡಿಕಲ್ ಸೆಂಟರ್ಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಹೀಗಾಗಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದರು.
ಅನ್ಬಳಗನ್ ಆಸ್ಪತ್ರೆಗೆ ದಾಖಲಾಗಿದ್ದಾಗಲೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆಮ್ಲಜನಕದ ಪ್ರಮಾಣ ಅರ್ಧಕ್ಕೆ ಕುಸಿದಿತ್ತು. ನಂತರವೂ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಕೊರೊನಾ ಸೋಂಕಿನ ಜೊತೆಗೆ ಅವರಿಗೆ ರಕ್ತದೊತ್ತಡ, ಕಿಡ್ನಿ ಸಮಸ್ಯೆ ಕೂಡ ಇದ್ದಿತ್ತು. ಹೀಗಾಗಿ ಕೊರೊನಾ ಸೋಂಕಿನಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೆಲದಿನಗಳ ಹಿಂದೆ ಅನ್ಬಳಗನ್ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು.