ಠಾಣೆಯೆದುರೇ ಜೂಜಾಟ: ಐವರು `ಪೋಲಿ’ಸರ ಸೆರೆ

ದಾವಣಗೆರೆ: ಇಲ್ಲಿನ ಗ್ರಾಮಾಂತರ ಠಾಣೆಯ ಎದುರಿನ ರೆಸ್ಟ್ ರೂಮಿನಲ್ಲೇ ಜೂಜಾಟ ನಿರತರಾಗಿದ್ದ ಐವರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಐಜಿ ಸ್ಕ್ವಾಡ್ ದಾಳಿ ನಡೆಸಿದ್ದ ವೇಳೆ ಜೂಜುಕೋರ ಪೊಲೀಸರು ಸಿಕ್ಕಿ ಬಿದ್ದಿದ್ದಾರೆ. ಈ ಕುರಿತು ಪೂರ್ವ ವಲಯದ ಐಜಿ ರವಿಯವರಿಗೆ ಮಾಹಿತಿ ಹೋಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದ್ದು ಸಿಬ್ಬಂದಿ ಲೋಹಿತ್, ನಾಗರಾಜ್, ಮಂಜಪ್ಪ, ಮಹೇಶ್ ಮತ್ತು ಬಾಲರಾಜ್ ಸಿಕ್ಕಿಬಿದ್ದಿದ್ದಾರೆ. ಬಂಧಿತರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಂದ 29 ಸಾವಿರ ರೂಪಾಯಿಯನ್ನು ವಶಪಡೆಯಲಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಜೂಜು ನಿಯಂತ್ರಿಸಲು ದಾಳಿ ನಡೆಸುವ ಪೊಲೀಸರಿಗೆ ತಮ್ಮದೇ ಠಾಣೆಯ ರೆಸ್ಟ್ ರೂಮಿನಲ್ಲಿ ತಮ್ಮದೇ ಸಿಬ್ಬಂದಿ ಜೂಜಾಡುವ ವೇಳೆ ಸಿಕ್ಕಿಬಿದ್ದಿರುವುದು ಜಿಲ್ಲೆಯಾದ್ಯಂತ ಚರ್ಚೆಯ ವಿಷಯವಾಗಿದೆ.