ಜ್ವರ ಬಂದರೆ ಐದು ದಿನ ಶಾಲೆಗೆ ಬರಬಾರದು ಎನ್ನುತ್ತಾರೆ!

ದೇಶದಲ್ಲಿ ಇನ್ನೂ ಕೊರೊನಾ ತಾಂಡವವಾಡುತ್ತಿದೆ. ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಾಕ್‌ಡೌನ್ ಸಂಪೂರ್ಣವಾಗಿ ತೆಗೆದು ಹಾಕುವುದು ಸರಿಯಲ್ಲ. ಅದರ ಸಡಿಲಿಕೆ ಮಾಡಿದ ಕೂಡಲೇ ಎಲ್ಲರೂ ತಮಗೆ ಅವಕಾಶ ಕೊಡಿ ಎಂದು ಕೇಳುವುದು ಸಾಧುವಲ್ಲ. ಮಾಲ್‌ಗಳು, ಸಿನಿಮಾ ಮಂದಿರಗಳು, ಕಲ್ಯಾಣ ಮಂಟಪಗಳು, ದೇವಳ, ಚರ್ಚ್, ಮಸೀದಿಗಳು ಸಂತೆಗಳು ಕೊರೊನಾ ಹಾಟ್‌ಸ್ಪಾಟ್ ಎಂದು ಗುರುತಿಸಲ್ಪಟ್ಟಿವೆ. ಅವುಗಳನ್ನು ಆರಂಭಿಸಬೇಕು ಎನ್ನುವುದು ಸಮಂಜಸವಾಗಲಾರದು.
ಶಾಲೆಗಳನ್ನು ಆರಂಭಿಸಬೇಕು ಎಂದು ಹೇಳುವುದು ಕೂಡಾ ಮೂರ್ಖತನವೇ ಆಗಿದೆ. ಶಾಲೆಗೆ ಹೋಗುವ ಮಗು ಜ್ವರ, ಶೀತದಿಂದ ಬಳಲಿದರೆ ವೈದ್ಯರು ‘ಇದು ಶಾಲೆಯಿಂದ ಹರಡಿದ ಕಾಯಿಲೆ’ ಎಂದು ಹೇಳಿ ಔಷಧಿ ಬರೆದು ಕೊಟ್ಟು ‘ಐದು ದಿನ ಶಾಲೆಗೆ ಕಳುಹಿಸಬೇಡಿ’ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಶಾಲೆಯಿಂದಲೂ ಇದೇ ಸೂಚನೆ ಬರುತ್ತದೆ. ಮಕ್ಕಳು ಮನೆಯಲ್ಲಿ ಸುರಕ್ಷಿತವಾಗಿರುತ್ತಾರೆ. ಶಾಲೆಗೆ ಹೋದರೆ ಇತರ ಮಕ್ಕಳಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.

ಮನೆಯ ಯಜಮಾನ ಮತ್ತು ಇತರ ಸದಸ್ಯರು ಹೊರಗೆ ಹೋಗಿ ಸುತ್ತಾಡಿಕೊಂಡು ಬರುತ್ತಾರೆ. ಅವರು ಮನೆಗೆ ಬಂದಾಗ ಅವರಿಂದ ಸಾಂಕ್ರಾಮಿಕ ರೋಗಗಳು ಮಕ್ಕಳಿಗೆ ಹರಡುವುದಿಲ್ಲವೇ? ಕೇವಲ ಶಾಲೆಯನ್ನೇ ಯಾಕೆ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದೀರಿ ಎಂದು ಖಾಸಗಿ ಶಾಲೆಗಳ ಪರವಾಗಿ ಕೆಲವರು ವಾದವನ್ನು ಮಂಡಿಸುತ್ತಾರೆ. ಮನೆಯ ಯಜಮಾನ ಹೊರಗಿನಿಂದ ತಂದ ಸಾಂಕ್ರಾಮಿಕ ರೋಗ ಮನೆಯ ಮಕ್ಕಳಿಗೆ ಹರಡುತ್ತದೆ ನಿಜ. ಆದರೆ ಆ ಮಗು ಶಾಲೆಗೆ ಹೋದರೆ ಒಂದು ತರಗತಿಯಲ್ಲಿರುವ ಮೂವತ್ತು ನಲುವತ್ತು ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಾಲೆಯ ಸಾವಿರಾರು ಮಕ್ಕಳಿಗೆ ಹರಡುತ್ತದೆ ಎಂಬುದನ್ನು ಇವರು ಯಾಕೆ ಗಮನಿಸುವುದಿಲ್ಲ? ಮಕ್ಕಳಿಂದ ಬಲು ಸುಲಭವಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂಬುದನ್ನು ಮರೆಯಬಾರದು.

ಶಾಲೆ ಆರಂಭಿಸಬೇಕು ಎನ್ನುವುದಕ್ಕೆ ಖಾಸಗಿ ಶಾಲೆಯವರು ಬಹಳಷ್ಟು ಕಾರಣಗಳನ್ನು ಕೊಡುತ್ತಾರೆ. ಮಕ್ಕಳು ಮನೆಯಲ್ಲಿ ಕುಳಿತು ಮಾನಸಿಕ ಉದ್ವೇಗಕ್ಕೆ ಒಳಗಾಗುತ್ತಿದ್ದಾರೆ. ಇದು ಅವರ ಮುಂದಿನ ವಿದ್ಯಾಭ್ಯಾಸದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಮನೆಯಲ್ಲಿ ಪೋಷಕರು ಹೇಳುವ ಮಾತುಗಳನ್ನು ಮಕ್ಕಳು ಕೇಳುವುದಿಲ್ಲ. ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಿದರೆ ಅದನ್ನು ಮಗು ಅರ್ಥಮಾಡಿಕೊಳ್ಳುವುದಿಲ್ಲ. ಅದು ವೈಜ್ಞಾನಿಕವಾಗಿ ಇರುವುದಿಲ್ಲ. ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಶಾಲೆಗಳು ಆರಂಭವಾದಾಗ ಮಕ್ಕಳನ್ನು ತಿದ್ದಲು ಮತ್ತು ಶಿಕ್ಷಣದ ಹಾದಿ ಹಿಡಿಸಲು ತುಂಬಾ ಕಷ್ಟವಾಗುತ್ತದೆ. ಈ ಎಲ್ಲಾ ಕಾರಣಗಳು ವೈಜ್ಞಾನಿಕ ಎಂದು ಪರಿಗಣಿಸಲ್ಪಡುತ್ತವೆ. ಶಿಕ್ಷಣ ತಜ್ಞರು ನೀಡಿದ ಸಲಹೆಗಳು ಎಂದು ಹೇಳಲ್ಪಡುತ್ತವೆ. ಖಾಸಗಿ ಸಂಸ್ಥೆಗಳ ಶಿಕ್ಷಣ ವ್ಯಾಪಾರೀಕರಣ ಆಗಿರುವುದನ್ನು ಯಾರು ಕೂಡಾ ನಿರಾಕರಿಸಲಾಗದ ಪರಿಸ್ಥಿತಿ ಇದೆ. ಇಂತಹ ವ್ಯಾಪಾರ ಕೇಂದ್ರದ ಪರವಾಗಿಯೇ ಸಲಹೆಗಳನ್ನು ನೀಡುವ ಶಿಕ್ಷಣ ತಜ್ಞರು ಅನೇಕ ಮಂದಿ ಇದ್ದಾರೆ ಎಂಬುದನ್ನು ಇಲ್ಲಿ ಮರೆಯಬಾರದು.

ಮಗುವಿಗೆ ಮನೆ ಮೊದಲ ಪಾಠಶಾಲೆ ಎಂಬ ಮಾತು ಇದೆ. ಇದು ಎಂದೆಂದಿಗೂ ಅನ್ವಯವಾಗುವ ಸಾರ್ವಕಾಲಿಕ ಸತ್ಯವಾಗಿದೆ. ಮಗು ಆರು ವರ್ಷದಲ್ಲಿ ಒಂದನೇ ತರಗತಿಯನ್ನು ಸೇರಿ ಶಿಕ್ಷಣವನ್ನು ಆರಂಭಿಸುತ್ತದೆ. ಕಳೆದ ಶತಮಾನದವರೆಗೂ ಈ ಪದ್ಧತಿ ಭಾರತದಾದ್ಯಂತ ಇತ್ತು. ಆದರೆ ಕಳೆದು ಹೋದ ಶತಮಾನದ ಕೊನೆಯ ಹಂತದಲ್ಲಿ ಒಂದನೇ ತರಗತಿಯ ಮೊದಲೇ ಮಕ್ಕಳಿಗೆ ಮನೆಯಿಂದ ಹೊರಗೆ ಶಿಕ್ಷಣ ನೀಡುವ ಪದ್ಧತಿ ಆರಂಭವಾಯಿತು. ಗಂಡ ಹೆಂಡತಿ ಕೆಲಸ ಮಾಡುತ್ತಿದ್ದರೆ ಮಕ್ಕಳನ್ನು ಪ್ಲೇಸ್ಕೂಲ್ ಕಳುಹಿಸುವ ಅಲ್ಲಿ ಪದ್ಧತಿ ಆರಂಭವಾಯಿತು. ಬೇಬಿ ಕ್ಲಾಸ್ ಎಂಬ ಶಿಕ್ಷಣ ನೀಡುವ ವ್ಯವಸ್ಥೆ ಇತ್ತು. ಮನೆಯಲ್ಲಿ ಮಕ್ಕಳು ತಂಟೆ ಮಾಡುತ್ತವೆ ಎಂದು ಅವರನ್ನು ಅಲ್ಲಿ ಬಿಟ್ಟು ಬಿಡುವ ಕೆಲಸವನ್ನು ಹೆತ್ತವರು ಮಾಡತೊಡಗಿದರು. ಅಲ್ಲಿ ಕಲಿಸಲಾಗುವ ಅಕ್ಷರಮಾಲೆ, ಪ್ರಾಸ ಹಾಡುಗಳನ್ನು ಕೇಳಿ ಸಂತಸ ಪಡಲಾಯಿತು. ಬರ ಬರುತ್ತಾ ಒಂದನೇ ತರಗತಿಗಿಂತ ಪೂರ್ವದ ಶಿಕ್ಷಣ ಕಡ್ಡಾಯ ಎಂಬ ಪರಿಸ್ಥಿತಿ ಉಂಟಾಗಿದ್ದು ಮಾತ್ರವಲ್ಲದೆ ಈಗೀಗ ಈ ಶಿಕ್ಷಣ ಒಂದು ದೊಡ್ಡ ದಂಧೆಯಾಗಿಬಿಟ್ಟಿದೆ. ಉತ್ತಮ ಸಂಬಳ ಬರುವ ಓರ್ವ ಅಧಿಕಾರಿಯ ಪತ್ನಿ ಸಮಯ ಕಳೆಯಲು ‘ಬ್ಯುಸಿನೆಸ್’ ಮಾಡಲು ಪ್ಲೇಸ್ಕೂಲ್, ಕಿಂಡರ್ ಗಾರ್ಟನ್ ಇತ್ಯಾದಿ ವ್ಯವಹಾರ ಆರಂಭಿಸುವಂತಾಯಿತು. ಕೆಲವರಿಗೆ ಇದು ಜೀವನೋಪಾಯವೂ ಆಯಿತು. ಖಾಸಗಿ ಶಾಲೆಗಳ ಒಡೆಯರ ಲಾಬಿಯೊಳಕ್ಕೆ ಇದು ವ್ಯವಸ್ಥಿತವಾಗಿ ಸೇರಿಕೊಂಡಿತು. ಮೂರು ವರ್ಷದಲ್ಲಿ ಪ್ಲೇಸ್ಕೂಲ್, ನಾಲ್ಕು, ಐದರಲ್ಲಿ ಕೆ.ಜಿ. ಪ್ರೆಪ್ ಇತ್ಯಾದಿ ಇತ್ಯಾದಿ ಅತ್ಯಾಧುನಿಕ ವ್ಯವಸ್ಥೆಯೊಳಗೆ ಕಲಿತ ಮಕ್ಕಳಿಗೆ ಮಾತ್ರ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪ್ರವೇಶ ಎಂಬುದು ನಿಯಮವಾಯಿತು. ಐದು ವರ್ಷಗಳ ಕಾಲ ಮನೆಯಲ್ಲಿ ಅಕ್ಕ ಪಕ್ಕದ ಮನೆಯ ಮಕ್ಕಳ ಜತೆ, ಹೆತ್ತವರ ಜತೆ ನಕ್ಕು, ನಲಿದು, ಹಠ ಹಿಡಿದು, ಹೊಡೆದಾಡಿ, ಹೊರಳಾಡಿ ಜೀವನ ಆರಂಭದ ಪಾಠ ಕಲಿತ ಮಕ್ಕಳಿಗೆ ಯಾರೂ ಮೂಸದ, ಕೊನೆಗೆ ಸರಕಾರಕ್ಕೂ ಬೇಡವಾದ ಸರಕಾರಿ ಶಾಲೆಯೇ ಗತಿಯಾಯಿತು! ಶಿಕ್ಷಣ ಎಂಬುದು ಖಾಸಗಿ ಲಾಬಿಯೊಳಗೆ ನಲುಗುವಂತಾಯಿತು.
ಇದೇ ಲಾಬಿ ಈಗ ಹೆತ್ತವರಿಗೆ ಮಕ್ಕಳ ಪ್ರಾಣ ಮುಖ್ಯವಲ್ಲ. ಶಿಕ್ಷಣ ಮುಖ್ಯ ಎಂದು ಸರಕಾರಕ್ಕೆ ಶಿಫಾರಸ್ಸು ಮಾಡುತ್ತಿದೆ! ಒತ್ತಡ ತರುತ್ತಿದೆ. ಜನರಿಂದ ಚುನಾಯಿಸಲ್ಪಟ್ಟು ಎಂ.ಪಿ. ಎಂಎಲ್‌ಎ ಎಂಬ ಸ್ಥಾನವನ್ನು ಪಡೆದ ಹೆಚ್ಚಿನ ಜನಪ್ರತಿನಿಧಿಗಳಿಗೆ ಖಾಸಗಿ ಶಾಲೆ ಎಂಬ ಲಾಭ ತರುವ ವ್ಯವಹಾರವಿದೆ. ಹಾಗಿರುವಾಗ ಇವರಿಗೆಲ್ಲಾ ಹಣ ಮುಖ್ಯವಾಗದೆ ಮಕ್ಕಳ ಪ್ರಾಣ ಮುಖ್ಯವಾಗುವುದಾದರೂ ಹೇಗೆ?

ಈಗ ಹೆಚ್ಚಿನ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಮನಸ್ಸಿಲ್ಲ. ಶಾಲೆಯಿಂದ ಸಾಂಕ್ರಾಮಿಕ ರೋಗವನ್ನು ಹೊತ್ತು ತಂದು ರಾತ್ರಿ ಇಡೀ ನಿದ್ದೆ ಇಲ್ಲದೆ ನರಳಿದ ಮಗುವಿನೊಂದಿಗೆ ನಿದ್ದೆಗೆಟ್ಟು ಬೆಳಗು ಮಾಡಿದ ನೆನಪು ಇದೆ. ಹಾಗಿರುವಾಗ ಈ ಘಾತುಕ ಕೊರೊನಾಕ್ಕೆ ತಮ್ಮ ಮಕ್ಕಳನ್ನು ಬಲಿ ಪಶು ಮಾಡುವುದಕ್ಕೆ ಯಾರು ಕೂಡಾ ಖಂಡಿತಾ ಒಪ್ಪುವುದಿಲ್ಲ. ಒಂದು ವರ್ಷ ಶಿಕ್ಷಣ ಇಲ್ಲದೇ ಇದ್ದರೂ ತೊಂದರೆ ಇಲ್ಲ. ನಮ್ಮ ಮಕ್ಕಳ ಆರೋಗ್ಯ ನಮಗೆ ಮುಖ್ಯ ಎಂದು ಅವರು ಹೇಳುತ್ತಿದ್ದಾರೆ. ಮಾಸ್ಕ್, ಸ್ಯಾನಿಟೈಝರ್, ಸಾಮಾಜಿಕ ಅಂತರ ಮುಂತಾದ ವಿಚಾರವನ್ನು ಬದಿಗಿಟ್ಟರೂ ಹಲವಾರು ಸಮಸ್ಯೆಗಳು ಮಕ್ಕಳ ಮುಂದೆ ಇದೆ.

ಆದರೆ ಖಾಸಗಿ ಶಿಕ್ಷಣದ ಲಾಬಿಗೆ ಇದು ಲೆಕ್ಕವೇ ಇಲ್ಲ. ಈಗಾಗಲೇ ಅವುಗಳು ಫೀಸು ಕಟ್ಟಿ ಎಂದು ಮೆಸೇಜ್, ಈ ಮೇಲ್ ಮಾಡಿ, ಫೋನಾಯಿಸಿ ಹೆತ್ತವರ ನಿದ್ದೆಗೆಡುವಂತೆ ಮಾಡಿದೆ. ತಿಂಗಳ ಫೀಸಿನ ಲೆಕ್ಕಾಚಾರ ಕೊಡಲು ಆನ್‌ಲೈನ್ ಶಿಕ್ಷಣವನ್ನು ಆರಂಭಿಸಿದೆ. ವಿವಿಧ ಆಪ್‌ಗಳನ್ನು ಉಪಯೋಗಿಸಿ ಶಿಕ್ಷಕರಿಂದ ಲೈವ್ ಪಾಠವನ್ನು ಮಾಡಿಸುತ್ತಿದೆ. ಶಿಕ್ಷಕರು ಮಾಡಿದ ಪಾಠವನ್ನು ರೆಕಾರ್ಡ್ ಮಾಡಿ ಮಕ್ಕಳಿಗೆ ಕಳುಹಿಸಿದರೆ ಅವರು ಅದನ್ನು ಮತ್ತೆ ಮತ್ತೆ ಕೇಳಿ ಎಲ್ಲಿ ಹೆಚ್ಚು ಕಲಿತು ಬಿಡುತ್ತಾರೋ ಎಂಬ ಭೀತಿ ಇವರಿಗೆ ಇದ್ದಂತಿದೆ. ಆನ್ ಲೈನ್ ಸಂಪರ್ಕ ಸರಿಯಾಗಿ ಸಿಗದ. ಇಂಟರ್ ನೆಟ್ ಸೌಲಭ್ಯ ಇಲ್ಲದ ಮಕ್ಕಳಿಗೆ ಈ ರೆಕಾರ್ಡ್ ಪಾಠದಿಂದ ಪ್ರಯೋಜನವಾಗುತ್ತದೆ. ಆದರೆ ಅದನ್ನು ಮಾಡಿದರೆ ಎಲ್ಲಿ ಎಡವಟ್ಟಾಗುವುದೋ ಎಂಬ ಭೀತಿ ಖಾಸಗಿ ಶಿಕ್ಷಣ ಲಾಬಿಗೆ ಇದೆ. ಇವರೆಲ್ಲರೂ ಒಂದು ಕಡೆ ಒಟ್ಟು ಸೇರಿ ಮಕ್ಕಳನ್ನು ಹೇಗೆ ಸತಾಯಿಸಬೇಕು. ಪೋಷಕರಿಗೆ ಹೇಗೆ ಒತ್ತಡ ಹೇರಬೇಕು ಎಂದು ಪೂರ್ವ ನಿರ್ಧಾರ ಮಾಡಿದಂತೆ ಕಂಡು ಬರುತ್ತದೆ. ಇವರಿಗೆಲ್ಲಾ ಒಂದು ಬಾರಿ ಶಾಲೆ ಆರಂಭವಾಗಿ ಬಿಟ್ಟರೆ ಸಾಕು ಆನಂತರ ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳುವ ಪೋಷಕರನ್ನು ಹೇಗೆ ಬಗ್ಗಿಸಬೇಕು ಎಂಬುದು ಗೊತ್ತಿದೆ. ‘ಇಮೋಶನಲ್ ಬ್ಲಾಕ್ ಮೇಲ್’ ಎಂಬ ಅಸ್ತ್ರ ಪ್ರಯೋಗಿಸಿದರೆ ಯಾವ ಹೆತ್ತವರು ಕೂಡಾ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಲಾರರು. ತಮ್ಮ ಮಗು ಶಿಕ್ಷಣದಲ್ಲಿ ಹಿಂದುಳಿಯುವುದನ್ನು ಯಾವ ಪೋಷಕರು ಬಯಸುತ್ತಾರೆ? ಇದಕ್ಕಾಗಿಯೇ ಇವರು ಈಗ ಸರಕಾರದ ನಿರ್ಧಾರದ ಮೇಲೆ ಪ್ರಭಾವ ಬೀರುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಲಾಬಿಯೊಳಗೇ ಮಂತ್ರಿ ಮಾಗಧರು, ನಿರ್ಧಾರ ತೆಗೆದುಕೊಳ್ಳುವ ಕ್ಯಾಬಿನೆಟ್ ದರ್ಜೆಯ ಜನಪ್ರತಿನಿಧಿಗಳು ಇರುವಾಗ ಇವರಿಗಿರುವ ಭೀತಿಯಾದರೂ ಏನು? ನಾವು ಸಾಧಿಸಿಯೇ ತೀರುತ್ತೇವೆ ಎಂಬ ಛಲವೂ ಈ ಮಂದಿಗೆ ಇದ್ದಂತಿದೆ.

ಸಾರ್ವಜನಿಕರ ಪ್ರತಿಭಟನೆ ಸದ್ಯದ ಮಟ್ಟಿಗೆ ಈ ಲಾಬಿಯನ್ನು ಕಂಗಡಿಸಿದೆ. ಒಂದೊಮ್ಮೆ ಜುಲೈ ತಿಂಗಳಲ್ಲಿ ಶಾಲಾರಂಭದ ಪಟ್ಟಿಯನ್ನು ಪ್ರಕಟಿಸಿದ ಕರ್ನಾಟಕ ಸರಕಾರ ಸದ್ಯಕ್ಕೆ ಅದರಿಂದ ಹಿಂದೆ ಸರಿದಂತೆ ಕಂಡು ಬರುತ್ತಿದೆ. ಕೊರೊನಾ ರುದ್ರ ತಾಂಡವ ನಿಲ್ಲುವವರೆಗೆ ಪೋಷಕರು, ಹೆತ್ತವರು ಶಾಲಾರಂಭವನ್ನು ಪ್ರತಿಭಟಿಸಬೇಕು. ಲಾಕ್‌ಡೌನ್ ನಿಂದ ಭಾರತದ ಆರ್ಥಿಕತೆಯ ಮೇಲೆಯೇ ಗದಾಪ್ರಹಾರವಾಗಿದೆ. ಎಲ್ಲಾ ವ್ಯವಹಾರಗಳು ಮುಂದೇನು ಎಂಬ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ನಿಂತು ಬಿಟ್ಟಿದೆ. ಈ ನಡುವೆ ನಮ್ಮ ಮಕ್ಕಳನ್ನು ಅಪಾಯದ ಕೂಪಕ್ಕೆ ದೂಡುವುದು ಎಷ್ಟು ಸರಿ ಎಂದು ಜನರು ಚಿಂತಿಸಬೇಕು. ಹಾಗಿದ್ದೂ ಖಾಸಗಿ ಶಿಕ್ಷಣ ಲಾಭಿಯೇ ಮೇಲುಗೈ ಸಾಧಿಸುತ್ತದೆ ಎಂದಾದರೆ ಮುಂದಿನ ದಿನಗಳಲ್ಲಿ ಬಲು ದೊಡ್ಡ ದುರಂತವನ್ನು ಎದುರು ನೋಡಬೇಕಾದೀತು.

✒️ರವೀಂದ್ರ ಶೆಟ್ಟಿ ಕುತ್ತೆತ್ತೂರು
ಆರ್‌ಕೆ ದಿನಚರಿ ಅಂಕಣದ 572ನೇ ಕಂತು

Leave a Reply

Your email address will not be published. Required fields are marked *