ಜೋಕಟ್ಟೆಯ ಮಹಿಳೆ ಕೊರೋನಾಕ್ಕೆ ಬಲಿ? ಜಿಲ್ಲೆಯಲ್ಲಿ 13ಕ್ಕೇರಿದ ಸಾವಿನ ಸಂಖ್ಯೆ!
ಮಂಗಳೂರು: ಸುರತ್ಕಲ್ ಸಮೀಪದ ಜೋಕಟ್ಟೆ ನಿವಾಸಿ 51ರ ಹರೆಯದ ಮಹಿಳೆ ಅನಾರೋಗ್ಯ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇಂದು ಬೆಳಗ್ಗೆ ಸುರತ್ಕಲ್ ನಿವಾಸಿ 31ರ ಹರೆಯದ ಯುವಕ ಹಾಗೂ ಬಂಟ್ವಾಳ ನಿವಾಸಿ ವೃದ್ಧೆ ಮೃತಪಟ್ಟಿದ್ದು ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 13ಕ್ಕೇರಿದೆ.
ಜೋಕಟ್ಟೆ ಸಮೀಪದ ನಿವಾಸಿ ಮಹಿಳೆ ಟಿಬಿ ಖಾಯಿಲೆಯಿಂದ ಬಳಲುತ್ತಿದ್ದು ಅದಕ್ಕಾಗಿ ಸುರತ್ಕಲ್ ಕಾನ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿ ಆರೋಗ್ಯ ತೀರಾ ಹದಗೆಟ್ಟ ಕಾರಣ ಜೂ. 26ರ ಸಂಜೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಪರೀಕ್ಷೆ ವೇಳೆ ಕೊರೋನಾ ಸೋಂಕು ಪತ್ತೆಯಾಗಿದೆ.
ಮಹಿಳೆಯ ಪತಿ ದಕ್ಕೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದು ಮನೆಯಲ್ಲಿ ವಾರದ ಹಿಂದೆ ಎಲ್ಲರಿಗೂ ಜ್ವರ ಬಂದಿತ್ತು ಎನ್ನಲಾಗಿದೆ. ಪಕ್ಕದ ಮನೆಯಲ್ಲೂ ಧಕ್ಕೆಯಲ್ಲಿ ಮೀನು ವ್ಯಾಪಾರ ಮಾಡುವವರಿದ್ದು ಅಲ್ಲಿ ಇಬ್ಬರಿಗೆ ಈಗಾಗಲೇ ಸೋಂಕು ದೃಢಪಟ್ಟಿತ್ತು. ದಕ್ಕೆ ಮೂಲದಿಂದಲೇ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲಾಡಳಿತ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಡಿಸಲಿದೆ.