ಜಾತಿ-ಮತದ ಹಂಗು ತೊರೆದು ಯಶವಂತ್ ಶವ ತವರಿಗೆ ತಲುಪಿಸಿದ ಅನಿವಾಸಿ ಕನ್ನಡಿಗರು!

ಮಂಗಳೂರು: ಲಾಕ್ ಡೌನ್ ಸಂದರ್ಭದಲ್ಲಿ ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದ ಯುಎಇಯ ಕನ್ನಡಿಗರು, ಅಬುಧಾಬಿಯಲ್ಲಿ ಕೆಲದಿನಗಳ ಹಿಂದೆ ಮೃತರಾಗಿದ್ದ ಕರಾವಳಿಯ ಯುವಕ ಯಶವಂತ್ ಪೂಜಾರಿಯ ಮೃತದೇಹವನ್ನು ಅಲ್ಲಿನ ಸರ್ಕಾರದ ಎಲ್ಲಾ ನಿಯಮ ಪಾಲಿಸಿ, ಪರವಾನಗಿ ಪಡೆದು ತಾಯ್ನಾಡಿಗೆ ರವಾನಿಸುವಲ್ಲಿ ಜಾತಿ ಮತದ ಬೇಧ ಮರೆತು ಯಶಸ್ವಿಯಾಗಿದ್ದಾರೆ. ಈ ಮೂಲಕ ಕರಾವಳಿಯಲ್ಲಿ ಸೌಹಾರ್ದತೆಗೆ ನಾಂದಿ ಹಾಡಿದ್ದಾರೆ.
ಅಬುಧಾಬಿಯಲ್ಲಿ ನಮ್ಮೂರಿನ ಯುವಕ ಯಶವಂತ ಪೂಜಾರಿಗೆ ಅಫಘಾತವಾಗಿದೆ ಎಂದು ಮುಝಮ್ಮಿಲ್ ಎಂಬವರು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡದ ಹಿದಾಯತ್ ಅಡ್ಡೂರ್ ರವರಿಗೆ ಮುಂಜಾನೆ ಕರೆಮಾಡಿ ತಿಳಿಸಿದಾಗ, ಅವನ ವಿವರ ನೀಡಿ ಎಂದಾಗ ಯಶವಂತನ ಒಂದು ಫೋಟೋ ಮತ್ತು ಆಧಾರ್ ಕಾರ್ಡ್ ಮಾತ್ರವಿರುವುದು, ಪಾಸ್ ಪೋರ್ಟ್ ಕಾಪಿ, ಮೊಬೈಲ್ ನಂಬರ್ ಅಥವಾ ಬೇರೆ ಯಾವುದೇ ದಾಖಲೆಗಳಿಲ್ಲ, ಅಪಘಾತದ ಸುದ್ದಿ ತಿಳಿದು ಅವರ ಕುಟುಂಬದವರ ಸ್ಥಿತಿ ಶೋಚನೀಯವಾಗಿದೆ, ಸ್ವಲ್ಪ ಸಹಾಯ ಮಾಡಿ ಎಂದಾಗ ಇದನ್ನು ಸವಾಲಾಗಿ ಸ್ವೀಕರಿಸಿ ಹಿದಾಯತ್ ಮತ್ತು ತಂಡ ಕಾರ್ಯಪ್ರವೃತ್ತರಾದರು.
ಯಶವಂತ್ ಕುರಿತು ಮಾಹಿತಿ ಕಲೆಹಾಕಲು ಹೊರಟಾಗ ಆತ ಮೃತಪಟ್ಟಿದ್ದು, ಅನಾಥ ಶವವಾಗಿ ಶವಾಗಾರದಲ್ಲಿ ಇರುವುದು ತಿಳಿದುಬಂದಾಗ, ಯಶವಂತ್ ಹೆತ್ತವರು ಅವರ ಮಗನ ಮುಖವನ್ನು ಕೊನೆಯ ಬಾರಿಗೆ ನೋಡಬೇಕು, ಹೇಗಾದರೂ ಮಾಡಿ ಊರಿಗೆ ಮೃತದೇಹವನ್ನು ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಬೇಡಿಕೊಂಡಾಗ, ಇದನ್ನು ಚರ್ಚಿಸಿ ಕಾರ್ಯರೂಪಕ್ಕೆ ತರಲು ಹಿದಾಯತ್ ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿ ಕನ್ನಡಿಗಾಸ್ ಹೆಲ್ಪ್ ಲೈನ್ ನ ಸಿರಾಜ್ ಪರ್ಲಡ್ಕ, ದಯಾ ಕಿರೋಡಿಯನ್, ನವೀದ್ ಮಾಗುಂಡಿ, ಅನಿವಾಸಿ ಕನ್ನಡಿಗರ ಒಕ್ಕೂಟದ ರಶೀದ್ ಬಿಜೈ, ಶರೀಫ್ ಸರ್ವೆ, ಬಶೀರ್ ಕೊಡ್ಲಿಪೇಟೆ, ಅಬುಧಾಬಿಯ ಪ್ರದೀಪ್ ಕಿರೋಡಿಯನ್, ಶ್ರೀಧರ್, ದೀಪ ಹಾಗೂ ಊರಿನಿಂದ ಆಸಿಫ್, ಮುಝಮ್ಮಿಲ್, ಭಾಗ್ಯರಾಜ್, ದೀಪಕ್, ರಾಜೇಶ್ ಮರೋಳಿ ಮತ್ತಿತರನ್ನು ಸೇರಿಸಿ ಮುನ್ನಡೆದರು.
ಕೊರೋನ ಸಂಕಷ್ಟದ ಈ ಸೂಕ್ಷ್ಮ ಸಮಯದಲ್ಲಿ ಪೋಸ್ಟ್ ಮಾರ್ಟಮ್ ನಡೆಸಿ ಸಹಜ ಸಾವು ಎಂದು ಖಚಿತಪಡಿಸಿ, ಕೋವಿಡ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಬಂದ ನಂತರವೂ ಯಶವಂತ ಪಾಸ್ ಪೋರ್ಟ್, ವಿಸಾ, ಎಮಿರೇಟ್ಸ್ ಕಾರ್ಡ್ ಯಾವುದೂ ಇರದೇ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲು ಪರವಾನಗಿ ಪಡೆಯುವುದು ಅಸಾಧ್ಯ ಎಂಬಂತಿದ್ದಾಗ ಭಾರತೀಯ ರಾಯಭಾರಿ ಕಚೇರಿಯಲ್ಲಿ ರಶೀದ್ ಬಿಜೈ ನೇತೃತ್ವದಲ್ಲಿ ತಾತ್ಕಾಲಿಕ ಪಾಸ್ ಪೋರ್ಟ್ ಮತ್ತು ಎಲ್ಲಾ ಪರವಾನಗಿ ಕೆಲಸ ತ್ವರಿತವಾಗಿ ನಡೆಯಿತು, ಈ ಸಂದರ್ಭದಲ್ಲಿ ದುಬೈ ಕಾನ್ಸುಲೇಟ್ ಮತ್ತು ಕಾರ್ಗೋ ಸಂಬಂಧಿಸಿದ ಎಲ್ಲಾ ಕೆಲಸಕ್ಕೂ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪ್ರವೀಣ್ ಶೆಟ್ಟಿಯವರೂ ಭರವಸೆ ನೀಡಿದರು. ಅದೇ ರೀತಿ ಊರಿನಲ್ಲಿ ಬೇಕಾದ ಎಲ್ಲಾ ಕಾನೂನಾತ್ಮಕ ಕೆಲಸವನ್ನು ನ್ಯಾಯವಾದಿ ಉಲ್ಲಾಸ್ ಪಿಂಟೋ ಮಾಡಿದರೆ,ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯವರನ್ನು ಕಂಡು ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ನೀಡಿ ಸಹಕರಿಸಿದ ಅಥಾವುಲ್ಲಾ ಜೋಕಟ್ಟೆ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಸಹಕರಿಸಿದ ಅಧಿಕಾರಿಗಳಾದ ಯತೀಶ್ ಉಳ್ಳಾಲ, ಪ್ರವೀಣ್ ಕುಮಾರ್ ಸರ್ ಸೇವೆ ಅನನ್ಯ.
ಯಶವಂತ್ ಕುಟುಂಬದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ದೈನಂದಿನ ಚಟುವಟಿಕೆ ಬಗ್ಗೆ ಮಾಹಿತಿ ನೀಡುತ್ತಿದ್ದ ಹಿದಾಯತ್ ರವರು ಮೃತದೇಹ ರವಾನಿಸಲು ಉಂಟಾಗುವ ಖರ್ಚುನ್ನು ಕನ್ನಡಿಗರ ತಂಡವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಭರವಸೆ ನೀಡಿದರು, ಅಬುಧಾಬಿಯಲ್ಲಿದ್ದ ಮೃತದೇಹ ದುಬೈ ಮೂಲಕ ತಾಯ್ನಾಡಿಗೆ ತಲುಪಬೇಕೆಂದು ಅಂತಿಮವಾದಾಗ ದುಬೈನಲ್ಲಿ ಪೊಲೀಸ್ ಮತ್ತು ಇತರ ಪರವಾನಗಿ ಕೆಲಸವನ್ನು ಹಮೀದ್ ಸತ್ತಿ ಕಲ್ಲ್ ನಡೆಸಿಕೊಟ್ಟು ಪೂರ್ತಿಗೊಂಡ ನಂತರ ಮೃತದೇಹದೊಂದಿಗೆ ಆಂಬ್ಯುಲೆನ್ಸ್ ನಲ್ಲಿ ಸಿರಾಜ್ ಪರ್ಲಡ್ಕ ಅಬುಧಾಬಿಯಿಂದ ದುಬೈ ತಲುಪಿ ದುಬೈನಲ್ಲಿ ನವೀದ್ ಮಾಗುಂಡಿ, ದಯಾ ಕಿರೋಡಿಯನ್, ಇಮ್ರಾನ್ ಖಾನ್, ಯಶವಂತ್ ಕರ್ಕೇರಾರವರು ಜೊತೆಗೂಡಿ ವಿಮಾನದಲ್ಲಿ ರವಾನಿಸುವ ಅಂತಿಮ ಕೆಲಸದಲ್ಲಿ ಪಾಲ್ಗೊಂಡು ಸಹಕರಿಸಿದರು. ಅದೇರೀತಿ ಮ್ರತ ದೇಹ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಸ್ವೀಕರಿಸಲು ಖಲೀಲ್ ಮತ್ತು ತಂಡ ಶ್ರಮವಹಿಸಿತ್ತು.
ಈ ಕುರಿತು ಮಾತನಾಡಿದ ಕನ್ನಡಿಗಾಸ್ ಹೆಲ್ಪ್ ಲೈನ್ ನ ಹಿದಾಯತ್ ಅಡ್ಡೂರ್, ಎಲ್ಲಕ್ಕಿಂತಲೂ ಮಿಗಿಲಾದದ್ದು ಮಾನವಧರ್ಮ,ಯಶವಂತ್ ನಮ್ಮ ಊರಿನ ಹುಡುಗ, ಕನ್ನಡಿಗ, ಹಾಗಾಗಿ ಇದು ನಮ್ಮ ಕರ್ತವ್ಯ, ಕೊನೆಗೂ ಯಶವಂತನ ತಾಯಿಗೆ ಆತನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿಲಿದೆ ಎಂಬ ಖುಷಿ ಇದೆ, ಈ ಕೆಲಸದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಹೀಗೆ ಎಲ್ಲಾ ಸಹೃದಯಿ ಸಹೋದರರು ಸಹಕಾರ ನೀಡಿದ್ದಾರೆ, ವಿಶೇಷವಾಗಿ ರಶೀದ್ ಬಿಜೈ ಹಾಗೂ ಇತರ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು, ಅಲ್ಲದೇ ಯಶವಂತ್ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಅನಿವಾಸಿ ಕನ್ನಡಿಗರು ಮುಂದೆ ಬಂದಿದ್ದು, ಅದನ್ನೂ ಶೀಘ್ರದಲ್ಲೇ ತಲುಪಿಸಲಾಗುವುದು ಎಂದರು.

1 thought on “ಜಾತಿ-ಮತದ ಹಂಗು ತೊರೆದು ಯಶವಂತ್ ಶವ ತವರಿಗೆ ತಲುಪಿಸಿದ ಅನಿವಾಸಿ ಕನ್ನಡಿಗರು!

  1. ಯಶವಂತನ ಸಾವು ಶೋಚನೀಯ.ಆತನ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಆ ಸಮಯದಲ್ಲಿ ಜಾತಿ ಮತಮರೆತು ಮಾನವೀಯತೆ ಮೆರೆದ ಎಲ್ಲಾ ಬಂಧುಗಳು ಸ್ತುತ್ಯರ್ಹರೇ….ಅವರ ಶ್ರಮ ಶ್ಲಾಘನೀಯ. ಈ ಮನಸ್ಥಿತಿ ನಿರಂತರವಾಗಿರಲಿ. ಯಾವದೂ ಕಾಲದಲ್ಲಿ ಯಾರದೋ ಸ್ವಾರ್ಥದಲ್ಲಿ ಹುಟ್ಟಿದ ಈ ಜಾತಿ ಮತ. ಅದನ್ನು ತಮ್ಮ ಓಟ್ ಬ್ಯಾಂಕ್ ರಾಜಕೀಯಕ್ಕೆ ಬಳಸಿದ ರಾಜಕೀಯ ನೇತಾರರಿಗೆ ಧಿಕ್ಕಾರವಿರಲಿ. ಮನುಷ್ಯ ಮನುಷ್ಯನ ಪ್ರೀತಿ ಅಮರವಾಗಿರಲಿ. *” ಮನುಜಮತ ವಿಶ್ವಪಥ”*

Leave a Reply

Your email address will not be published. Required fields are marked *