ಚೀನಾದ ರೈಲು ಯೋಜನೆಗೆ ಪೆಟ್ಟು ನೀಡಿದ ಕೀನ್ಯಾ!

ನೈರೋಬಿ: ವಿದೇಶದಲ್ಲಿ ದೊಡ್ಡ ದೊಡ್ಡ ಯೋಜನೆಯನ್ನು ರೂಪಿಸಿ, ಬಳಿಕ ಆ ದೇಶವನ್ನೇ ತನ್ನ ಮಾರುಕಟ್ಟೆಯ ಕೇಂದ್ರವನ್ನಾಗಿ ಮಾಡುವ ಚೀನಾದ ತಂತ್ರಕ್ಕೆ ಆಫ್ರಿಕಾದ ರಾಷ್ಟ್ರ ಕೀನ್ಯಾ ಈಗ ಬಲವಾದ ಪೆಟ್ಟು ನೀಡಿದೆ. ಕೀನ್ಯಾದಲ್ಲಿ ಚೀನಾ ಆರಂಭಿಸಿದ್ದ 3.2 ಶತಕೋಟಿ ಡಾಲರ್ ಮೊತ್ತ ಯೋಜನೆ ಅಕ್ರಮ ಎಂದು ಅಲ್ಲಿನ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಮೊಂಬಾಸ ಬಂದರುನಿಂದ ರಾಜಧಾನಿ ನೈರೋಬಿವರೆಗಿನ 440 ಕಿ.ಮೀ ಉದ್ದದ ರೈಲ್ವೇ ಯೋಜನೆಯ ಟೆಂಡರ್ ಅನ್ನು ಚೀನಾ ರೋಡ್ ಆಂಡ್ ಬ್ರಿಡ್ಜ್ ಕಾರ್ಪೋರೇಷನ್(ಸಿಆರ್ಬಿಸಿ) ಪಡೆದುಕೊಂಡಿತ್ತು. 2014ರಲ್ಲಿ ಈ ಯೋಜನೆ ಆರಂಭಿಸಿದಾಗ ಕೀನ್ಯಾದ ಹೋರಾಟಗಾರ ಒಕಿಯಾ ಎಂಬವರು ಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ರೈಲ್ವೇ ಜನರ ತೆರಿಗೆಯಿಂದ ನಡೆಯುತ್ತಿದೆ. ಹೀಗಾಗಿ ರೈಲ್ವೇ ಅಡಿಯಲ್ಲಿ ನಡೆಯುತ್ತಿರುವ ಯೋಜನೆಗಳು ಪಾರದರ್ಶಕವಾಗಿರಬೇಕು. ಆದರೆ ಈ ಟೆಂಡರ್ನಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಟೆಂಡರ್ ಕರೆಯದೇ ಏಕಪಕ್ಷೀಯವಾಗಿ ಯೋಜನೆಗೆ ಅನುಮತಿ ನೀಡಲಾಗಿದೆ. ಈ ಯೋಜನೆಯಿಂದ ಕೀನ್ಯಾ ಪ್ರಜೆಗಳ ಮೇಲೆ ತೆರಿಗೆಯ ಭಾರ ಬೀಳಲಿದೆ ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಒಕಿಯಾ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದು ಈಗ ಕೋರ್ಟ್ ಒಕಿಯಾ ಪರವಾಗಿ ತೀರ್ಪು ನೀಡಿ ಅಕ್ರಮ ಎಂದು ಹೇಳಿದೆ. ಬಹುತೇಕ ಈ ಯೋಜನೆ ಪೂರ್ಣಗೊಂಡಿದ್ದು 2017ರಿಂದ ಪ್ರಯಾಣಿಕರ ರೈಲು ಮತ್ತು ಗೂಡ್ಸ್ ರೈಲುಗಳು ಸಂಚರಿಸುತ್ತಿವೆ. ಈ ಯೋಜನೆಗೆ ಚೀನಾದ ಎಕ್ಸಿಮ್ ಬ್ಯಾಂಕು ಸಾಲ ನೀಡಿದೆ. ಕೀನ್ಯಾ ರೈಲ್ವೇ ಮತ್ತು ಚೀನಾದ ಸಿಆರ್ಬಿಸಿ ಕಂಪನಿ ಈ ಯೋಜನೆಯನ್ನು ಸಮರ್ಥಿಸಿಕೊಂಡಿದ್ದು ಅಕ್ರಮ ನಡೆದಿಲ್ಲ ಎಂದು ಕೋರ್ಟ್‍ನಲ್ಲಿ ವಾದಿಸಿದೆ. ಮುಂದೆ ಈ ಯೋಜನೆ ಏನಾಗಬಹುದು ಎಂಬ ಕುತೂಹಲ ಎದ್ದಿದ್ದು ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *