ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿಗೆ ರಾಜ್ಯ ಸಭಾ ಸ್ಥಾನ!?

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ಈ ಬಾರಿ ಐವರು ಕಣದಲ್ಲಿದ್ದಾರೆ. ಪ್ರಭಾಕರ ಕೋರೆ, ರಮೇಶ್ ಕತ್ತಿ, ಎಂ.ನಾಗರಾಜ್, ಹಾಗೂ ಗೋಲ್ಡ್ ಫಿಂಚ್ ಮಾಲಕರಾದ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿಯವರ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಈ ಮಧ್ಯೆ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಅವರನ್ನು ಕೂಡ ರಾಜ್ಯಸಭೆಗೆ ಆಯ್ಕೆ ಮಾಡುವ ಸಾಧ್ಯತೆಗಳೂ ಇವೆ.
“ಪ್ರಕಾಶಭಿನಂದನಾ” ಕಾರ್ಯಕ್ರಮದ ಮೂಲಕ ನಾಡಿನ ಜನತೆಗೆ ಪರಿಚಿತರಾಗಿರುವ ಕೊಡುಗೈ ದಾನಿ ಕೆ.ಪ್ರಕಾಶ್ ಶೆಟ್ಟಿಯವರು ಈ ಹಿಂದೆ ರಾಜ್ಯ ನೆರೆ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ ನೀಡಿದ್ದರು. ಈ ಬಾರಿ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನತೆಗೆ ನೆರವಾಗಿರುವ ಇವರು ಕೋಟ್ಯಂತರ ರೂ. ಮೊತ್ತದ ಆಹಾರ ಕಿಟ್ ಗಳನ್ನು ವಿತರಿಸಿ ಸಮಾಜಸೇವೆಯಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಸಭೆ ನಡೆಯಲಿದ್ದು ಈ ವೇಳೆ ಹೆಸರು ಫೈನಲ್ ಆಗಲಿದೆ. ಈಗಾಗಲೇ ಕೇಸರಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಕೆ. ಪ್ರಕಾಶ್ ಶೆಟ್ಟಿ ಅವರು ಸಂಘಪರಿವಾರದ ಹಿರಿಯ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಆಡಳಿತ ನಡೆಸುತ್ತಿರುವ ಬಿಜೆಪಿಗೆ ಎರಡು ಸ್ಥಾನ ಲಭಿಸಲಿದೆ. ಹಾಲಿ ಸದಸ್ಯ ಪ್ರಭಾಕರ ಕೋರೆ ಅವರು ತಮ್ಮನ್ನು ಮೂರನೇ ಬಾರಿಗೆ ಆಯ್ಕೆ ಮಾಡುವಂತೆ ಈಗಾಗಲೇ ಯಡಿಯೂರಪ್ಪ ಬಳಿ ದುಂಬಾಲು ಬಿದ್ದಿದ್ದಾರೆ. ಮಾಜಿ ಸಂಸದ ರಮೇಶ್ ಕತ್ತಿ ಪರವಾಗಿ ಅವರ ಸೋದರ ಉಮೇಶ್ ಕತ್ತಿ ಈಗಾಗಲೇ ಬಹಿರಂಗ ಹೋರಾಟಕ್ಕೆ ಇಳಿದಿದ್ದಾರೆ. ಆದರೆ ಅಂತಿಮವಾಗಿ ಕೆ. ಪ್ರಕಾಶ್ ಶೆಟ್ಟಿ ಹಾಗೂ ಮುರಳೀಧರ ರಾವ್ ಅವರಿಗೆ ಪಕ್ಷ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ.

Leave a Reply

Your email address will not be published. Required fields are marked *