ಗೋಮಾಂಸ ಸಾಗಾಟದ ವಾಹನ ತಡೆದು ಮಾಂಸಕ್ಕೆ ಸೀಮೆಎಣ್ಣೆ ಸುರಿದ ಐವರ ಸೆರೆ
ಮಂಗಳೂರು: ಮಾರಾಟದ ಉದ್ದೇಶದಿಮದ ಕುದ್ರೋಳಿ ಕಸಾಯಿಖಾನೆಯಿಂದ ಗೋಮಾಂಸವನ್ನು ಕಂಕನಾಡಿ ಮಾರುಕಟ್ಟೆಗೆ ಟೆಂಪೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಚಾಲಕನಿಗೆ ಹಲ್ಲೆಗೈದು ಮಾಂಸಕ್ಕೆ ಸೀಮೆಎಣ್ಣೆ ಸುರಿದು ಪರಾರಿಯಾಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುರತ್ಕಲ್ ಹೊಸಬೆಟ್ಟು ನಿವಾಸಿ ದೀಕ್ಷಿತ್ ಕುಮಾರ್(19), ಕುಚ್ಚಿಗುಡ್ಡೆ ನಿವಾಸಿ ರಾಜು ಪೂಜಾರಿ(19), ಅತ್ತಾವರ ನಿವಾಸಿ ಸಂತೋಷ್ ಕುಮಾರ್(31), ಬಾಲಚಂದ್ರ(28), ಉಳ್ಳಾಲ ನಿವಾಸಿ ರಕ್ಷಿತ್ ಪೂಜಾರಿ(22) ಎಂದು ಹೆಸರಿಸಲಾಗಿದೆ.
ಕುದ್ರೋಳಿ ನಿವಾಸಿ ಅಬ್ದುಲ್ ರಶೀದ್(57) ಎಂಬವರು ನಿನ್ನೆ ಮುಂಜಾನೆ ತನ್ನ ಟೆಂಪೋ ರಿಕ್ಷಾದಲ್ಲಿ 200 ಕೆಜಿ ಗೋಮಾಂಸ ಸಾಗಾಟ ಮಾಡುತ್ತಿದ್ದಾಗ ಬೈಕ್ ಗಳಲ್ಲಿ ಹಿಂಬಾಲಿಸಿ ಬಂದಿದ್ದ ತಂಡ ನಗರದ ಫಳ್ನೀರ್ ಬಳಿ ತಡೆದು ರಶೀದ್ ಮೇಲೆ ಹಲ್ಲೆಗೈದು ಗೋಮಾಂಸಕ್ಕೆ ಸೀಮೆಎಣ್ಣೆ ಸುರಿದು ಪರಾರಿಯಾಗಿದ್ದರು. ಕದ್ರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.