`ಗೋಕಳ್ಳ ಹನೀಫ್ ಮೇಲೆ ಗೂಂಡಾ ಕಾಯ್ದೆ ಹಾಕಿ’ -ಬಜರಂಗದಳ ಆಗ್ರಹ

ಮಂಗಳೂರು: ಕೆಲದಿನಗಳ ಹಿಂದೆ ಕೊಟ್ಟಾರದಲ್ಲಿ ಗೋಕಳ್ಳ ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಜೋಕಟ್ಟೆಯ ಮುಹಮ್ಮದ್ ಹನೀಫ್ ಅಂತಾರಾಜ್ಯ ಗೋವು ಕಳ್ಳ ಸಾಗಾಟಗಾರನಾಗಿದ್ದು ಈತನ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಗ್ರಹಿಸಿದೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು,ಕಳೆದ ವರ್ಷ ಜೋಕಟ್ಟೆಯಲ್ಲಿದ್ದ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಿ ವಶಪಡಿಸಿದ ಗೋವುಗಳನ್ನು ಈತ ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯದಿಂದ ಹಿಂಪಡೆದ ಸಂದರ್ಭ ಸಾರ್ವಜನಿಕವಾಗಿ ಪಟಾಕಿ ಸಿಡಿಸಿ ಸಂಭ್ರಮವನ್ನಾಚರಿಸಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದ. ಆರೋಪಿ ವಿರುದ್ಧ ಬ್ರಹ್ಮಾವರ, ಸಕಲೇಶಪುರ, ಹಾಸನ, ಚಿಕ್ಕಮಗಳೂರು, ಉಪ್ಪಿನಂಗಡಿ ಮತ್ತು ಪಣಂಬೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಅಕ್ರಮ ಗೋಸಾಗಾಟಕ್ಕೆ ಸಂಬಂಧಿಸಿ ಉರ್ವಾ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು ಪಣಂಬೂರು ಠಾಣೆಯ ರೌಡಿಶೀಟರ್ ಆಗಿದ್ದಾನೆ. ಈತನ ಮೇಲೆ ಗೂಂಡಾಕಾಯ್ದೆಯನ್ನು ಹಾಕಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.
`ಆರೋಪಿ ಹನೀಫ್ ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಸೂಕ್ತ ದಾಖಲೆಯನ್ನು ಹೊಂದಿ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾನೆ. ಕಾನೂನು ಪ್ರಕಾರ ಯಾವುದೇ ಜಾನುವಾರುಗಳನ್ನು ವಾಹನದಲ್ಲಿ ಸಾಗಾಟ ಮಾಡಲು ಆರ್ ಟಿಒದಲ್ಲಿ ಜಾನುವಾರು ಸಾಗಾಟದ ವಾಹನ ಎಂದು ಬರೆದಿರಬೇಕು. ಸರಕಾರಿ ಪಶು ವೈದ್ಯಾಧಿಕಾರಿ ಜಾನುವಾರುಗಳು ಸಾಗಾಟಯೋಗ್ಯ ಎಂದು ಸರ್ಟಿಫಿಕೇಟ್ ನೀಡಿರಬೇಕು. ಆದರೆ ಆರೋಪಿಯಲ್ಲಿ ಇದಾವುದೂ ಇರಲಿಲ್ಲ’ ಎಂದು ಹೇಳಿದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನಿರಂತರ ಗೋಕಳ್ಳತನ ಮತ್ತು ಅಕ್ರಮ ಗೋಸಾಗಾಟ ನಡೆಯುತ್ತಿದ್ದರೂ ಸರಕಾರ ಕಠಿಣ ಕ್ರಮ ಜರುಗಿಸುತ್ತಿಲ್ಲ. ಸರಕಾರದ ನಿರ್ಲಕ್ಷ್ಯದಿಂದ ಇಂಥ ಕೃತ್ಯಗಳು ಹೆಚ್ಚುತ್ತಿವೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್ ಆರೋಪಿಸಿದ್ದಾರೆ. ಪ್ರತೀ ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ಮತ್ತು ಕಳ್ಳ ಸಾಗಾಟ ತಡೆಯಲು ವಿಶೇಷ ಪಡೆ ರಚಿಸಬೇಕು. ಠಾಣಾ ವ್ಯಾಪ್ತಿಯಲ್ಲಿ ಈ ಬಗ್ಗೆ ಬೇಹುಗಾರಿಕೆ ನಡೆಸಿ ಗೋಸಾಗಾಟ, ಕಸಾಯಿಖಾನೆ ನಡೆಯದಂತೆ ನೋಡಿಕೊಳ್ಳಬೇಕು. ಗೋವುಗಳನ್ನು ರಕ್ಷಿಸಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪ್ ವೆಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *