ಗರ್ಭಿಣಿ ಆನೆ ಹತ್ಯೆ: ಪ್ರಾಥಮಿಕ ತನಿಖಾ ವರದಿ ಬಹಿರಂಗ

ತಿರುವನಂತಪುರಂ: ಕೇರಳದ ಗರ್ಭಿಣಿ ಆನೆ ಸಾವಿನ ಪ್ರಕರಣದ ಪ್ರಾಥಮಿಕ ತನಿಖಾ ವರದಿ ಬಂದಿದ್ದು, ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲು ಮಾಡಿಕೊಂಡಿರುವ ಪೊಲೀಸ್, ಅರಣ್ಯ ಇಲಾಖೆ ಜಂಟಿಯಾಗಿ ತನಿಖೆ ಕೈಗೊಂಡಿವೆ. ಪರಿಸರ ಇಲಾಖೆ ಇಂದು ಆನೆ ಸಾವಿನ ಕುರಿತು ಮಾಹಿತಿ ನೀಡಿದೆ. `ಪ್ರಾಥಮಿಕ ತನಿಖೆಯಲ್ಲಿ ಆನೆ ಆಕಸ್ಮಿಕವಾಗಿ ಸ್ಫೋಟಕ ತುಂಬಿದ ಹಣ್ಣನ್ನು ತಿಂದಿದೆ ಎಂದು ಅಂದಾಜಿಸಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಹೇಳಿದೆ.
ಗರ್ಭಿಣಿ ಆನೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ವ್ಯಕ್ತಿ ಆನೆ ಮೃತಪಟ್ಟ ಪ್ರದೇಶದ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಿಗೆ ಸ್ಫೋಟಕ ಸರಬರಾಜು ಮಾಡುತ್ತಿದ್ದ ಎಂಬ ಆರೋಪಗಳಿವೆ. 15 ವರ್ಷದ ಆನೆ ಸ್ಫೋಟಕ ತುಂಬಿದ್ದ ಅನಾನಸ್ ಹಣ್ಣನ್ನು ತಿಂದು ಗಂಭೀರವಾಗಿ ಗಾಯಗೊಂಡಿತ್ತು. ಆಹಾರ ಸೇವಿಸಲು ಸಾಧ್ಯವಾಗದೇ ಮೇ 27ರಂದು ಆನೆ ಮೃತಪಟ್ಟಿತ್ತು.