ಗರ್ಭಿಣಿ ಆನೆಯ ಹತ್ಯೆ: ರತನ್ ಟಾಟಾ ಆಕ್ರೋಶ

ಪಾಲಕ್ಕಾಡ್ : ಕೇರಳದಲ್ಲಿ ಗರ್ಭಿಣಿ ಆನೆಯ ಹತ್ಯೆಗೆ ಸಂಬಂಧಿಸಿ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು ಪ್ರಾಣಿಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಖೇದ ವ್ಯಕ್ತಪಡಿಸುತ್ತಿದ್ದಾರೆ.
ಘಟನೆಯ ಬಗ್ಗೆ ಖ್ಯಾತ ಉದ್ಯಮಿ ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಕೂಡ ಅಸಮಾಧಾನ ತೋರಿದ್ದಾರೆ. ಇದೊಂದು ಹೀನ ಕೃತ್ಯ ಎಂದು ಜರಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರತನ್ ಟಾಟಾ, ‘ಕೆಲವರು ಗರ್ಭಿಣಿ ಆನೆಯ ಬಾಯಲ್ಲಿ ಸ್ಫೋಟಕ ತುಂಬಿದ ಅನಾನಸ್ ಹಣ್ಣನ್ನು ಇಡುವ ಮೂಲಕ ಆಕೆಯ ಸಾವಿಗೆ ಕಾರಣರಾಗಿರುವುದು ಬೇಸರ ಮೂಡಿಸಿದೆ. ಮುಗ್ಧ ಪ್ರಾಣಿಗಳನ್ನು ಈ ರೀತಿ ಹತ್ಯೆ ಮಾಡುವುದು ಮತ್ತು ಮುನುಷ್ಯರ ಪೂರ್ವ ನಿಯೋಜಿತ ಕೊಲೆಗೂ ಯಾವುದೇ ವ್ಯತ್ಯಾಸವಿಲ್ಲ’ ಎಂದಿದ್ದಾರೆ.
ಕೇರಳದ ಪಾಲಕ್ಕಾಡ್ನ ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ನ ಆನೆ ಗರ್ಭಿಣಿಯಾಗಿತ್ತು. ಮೇ 27ರಂದು 15 ವರ್ಷದ ಈ ಆನೆ ಹತ್ತಿರದಲ್ಲಿದ್ದ ಊರೊಳಗೆ ಪ್ರವೇಶಿಸಿತ್ತು. ಊರಿನ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಆ ಆನೆಯನ್ನು ನೋಡಿ ಎಲ್ಲರೂ ಹೆದರಿ ಮನೆಯಲ್ಲಿ ಕುಳಿತಿದ್ದರು. ಕೆಲವರು ಆನೆಗೆ ತಿನ್ನಲು ಪೈನಾಪಲ್ ಹಣ್ಣನ್ನು ನೀಡಿದರು. ಮೊದಲೇ ಹಸಿವಿನಿಂದ ಆಹಾರಕ್ಕಾಗಿ ಹುಡುಕಾಡುತ್ತಿದ್ದ ಆನೆ ಆ ಹಣ್ಣನ್ನು ತಿನ್ನುತ್ತಿದ್ದಂತೆ ಅದರೊಳಗಿದ್ದ ಮದ್ದುಗುಂಡು ಸ್ಫೋಟವಾಯಿತು. ಪೈನಾಪಲ್ ಹಣ್ಣಿನೊಳಗೆ ಸ್ಫೋಟಕವನ್ನು ತುಂಬಿದ್ದರಿಂದ ಆನೆಯ ಬಾಯಿಗೆ ತೀವ್ರ ಗಾಯವಾಗಿತ್ತು. ಪ್ರಾಣ ಹೋಗುವಷ್ಟು ನೋವಾದರೂ ಆ ಆನೆ ಅಲ್ಲಿದ್ದ ಯಾರೊಬ್ಬರಿಗೂ ತೊಂದರೆ ಕೊಡಲಿಲ್ಲ, ಮನೆ-ಅಂಗಡಿಗಳಿಗೂ ಹಾನಿ ಮಾಡಲಿಲ್ಲ. ತನ್ನ ನೋವನ್ನು ನುಂಗಿಕೊಂಡು ಕಾಡಿನೊಳಗೆ ಸೇರಿಕೊಂಡ ಆನೆ ನಂತರ ವೆಲ್ಲಿಯಾರ್ ನದಿಯೊಳಗೆ ಇಳಿದು ತನ್ನ ಬಾಯಿ, ಸೊಂಡಿಲನ್ನು ನೀರಿನಲ್ಲಿಟ್ಟುಕೊಂಡು ನಿಂತಿತ್ತು. ಈ ವೇಳೆ ಅಲ್ಲಿಯೇ ಆನೆ ಮೃತಪಟ್ಟಿತ್ತು.

Leave a Reply

Your email address will not be published. Required fields are marked *