ಗರ್ಭಿಣಿ ಆನೆಯ ಹತ್ಯೆ: ಕ್ರೀಡಾಪಟುಗಳ ಆಕ್ರೋಶ

ಮುಂಬೈ: ಪೈನಾಪಲ್‍ನಲ್ಲಿ ಪಟಾಕಿ ಇಟ್ಟು 15 ವರ್ಷದ ಗರ್ಭಿಣಿ ಆನೆಯನ್ನು ಕೊಲೆಗೈದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಪ್ರಕರಣದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಆನೆ ಹಾಗೂ ಅದರ ಗರ್ಭದಲ್ಲಿ ಮರಿಯಾನೆ ಇರುವ ಕಾರ್ಟೂನ್ ಫೊಟೋವನ್ನು ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, “ಕೇರಳದ ಘಟನೆಯ ಬಗ್ಗೆ ಕೇಳಿ ತುಂಬಾ ಆಘಾತವಾಯಿತು. ಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು, ಅವುಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡುತ್ತೇನೆ. ಇಂತಹ ಹೇಡಿತನ ಕೃತ್ಯಗಳಿಗೆ ಅಂತ್ಯ ಹಾಡೋಣ” ಎಂದು ಕರೆ ನೀಡಿದ್ದಾರೆ. ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್, “ಪೈನಾಪಲ್‍ನಲ್ಲಿ ಪಟಾಕಿ ತುಂಬಿ ಗರ್ಭಿಣಿ ಆನೆಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು. ಮುಗ್ಧ ಆನೆ ಮೇಲೆ ಇಂತಹ ಕ್ರೌರ್ಯ ಎಸೆಗಿದ್ದು ಎಷ್ಟು ಸರಿ” ಎಂದು ಪ್ರಶ್ನಿಸಿದ್ದಾರೆ. ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಟ್ವಿಟ್ ಮಾಡಿ, ಇದು ತುಂಬಾ ದುಃಖಕರ ಘಟನೆ ಎಂದು ಹೇಳಿದ್ದಾರೆ. ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, “ಅವಳು ಮುಗ್ಧ ಗರ್ಭಿಣಿ ಆನೆ. ರಾಕ್ಷಸರೇ ನೀವು ಶಿಕ್ಷೆ ಅನುಭವಿಸುತ್ತೀರಾ ಎಂದು ಭಾವಿಸುತ್ತೇನೆ. ನಾವು ಪ್ರಕೃತಿಯನ್ನು ಮತ್ತೆ ಮತ್ತೆ ವಿಫಲಗೊಳಿಸುತ್ತಲೇ ಇರುತ್ತೇವೆ. ಹಾಗಾಗಿ ನಾವು ಹೆಚ್ಚು ವಿಕಸನಗೊಂಡಿರುವ ಪ್ರಭೇದ ಎನ್ನುವುದನ್ನು ನನಗೆ ತಿಳಿಸಿಕೊಡಿ” ಎಂದು ಟ್ವಿಟ್ ಮಾಡಿದ್ದಾರೆ.  

Leave a Reply

Your email address will not be published. Required fields are marked *