ಗರ್ಭಿಣಿಯ ಮೇಲೆ ಅತ್ಯಾಚಾರ ಆರೋಪ: ಜೈನ ಸನ್ಯಾಸಿ ಸೆರೆ

ಜೈಪುರ: ಗರ್ಭಿಣಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜೈನ ಸನ್ಯಾಸಿಯನ್ನು ಪೊಲೀಸರು ಬಂಧಿಸಿದ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ. ಸನ್ಯಾಸಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಜೈನ ಸನ್ಯಾಸಿ ಮನೆಯಲ್ಲಿ ಪೆನ್ ಡ್ರೈವ್, ಕಾಂಡೋಮ್ ಪ್ಯಾಕೆಟ್ ಮತ್ತು ಎರಡು ಲ್ಯಾಪ್‍ಟಾಪ್, ಮೊಬೈಲ್ ಫೋನ್‍ಗಳು ಪತ್ತೆಯಾಗಿದೆ. ಆರೋಪಿ ಸನ್ಯಾಸಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು ಎನ್ನಲಾಗಿದೆ. 
ಬಂಧಿತ ಆರೋಪಿಯನ್ನು 38 ವರ್ಷದ ಜೈನ ಸನ್ಯಾಸಿ ಸುಕುಮಾಲ್ ನಂದಿ ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳು ಆರೋಪಿ ವಾಸಿಸುತ್ತಿದ್ದ ಸಮುದಾಯದ ಆಶ್ರಯ ಮನೆಯೊಂದರಲ್ಲಿ ದೊಡ್ಡ ಬ್ಯಾಗ್‍ನಲ್ಲಿ ಪತ್ತೆಯಾಗಿವೆ. ಬಂಧಿತ ಆರೋಪಿ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯ ತಂಡವನ್ನು ಕರೌಲಿಗೆ ನಿಯೋಜಿಸಲಾಗಿತ್ತು. ಈ ತಂಡವು ಶುಕ್ರವಾರ ಬೆಳಗ್ಗೆ ಆರೋಪಿ ಸನ್ಯಾಸಿ ವಾಸಿಸುತ್ತಿದ್ದ ಮನೆಗೆ ಹೋಗಿದೆ. ಅಲ್ಲಿ ತಪಾಸಣೆ ಮಾಡುವ ಸಂದರ್ಭದಲ್ಲಿ ದೊಡ್ಡ ಬ್ಯಾಗ್‍ಯೊಂದು ಪತ್ತೆಯಾಗಿದೆ. ಆ ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ 19 ಮೊಬೈಲ್ ಫೋನ್, ಎರಡು ಲ್ಯಾಪ್‍ಟಾಪ್, ನಾಲ್ಕು ಹಾರ್ಡ್ ಡಿಸ್ಕ್, ಕಾಂಡೋಮ್ ಪ್ಯಾಕೆಟ್‍ಗಳು ಮತ್ತು 33 ಪೆನ್ ಡ್ರೈವ್‍ಗಳನ್ನು ಪತ್ತೆಯಾಗಿದೆ. ತನಿಖಾ ಅಧಿಕಾರಿಗಳು ಹಾರ್ಡ್ ಡಿಸ್ಕ್ ಗಳನ್ನು ಸ್ಕ್ಯಾನ್ ಮಾಡಿದ್ದಾರೆ. ಅದರಲ್ಲಿ ಅನೇಕ ಅಶ್ಲೀಲ ವಿಡಿಯೋ ಇರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಸಂತ್ರಸ್ತೆ ಗರ್ಭಿಣಿ ತನ್ನ ಅತ್ತಿಗೆಯೊಂದಿಗೆ ಗುರುವಾರ ಆಶೀರ್ವಾದ ಪಡೆಯಲು ಆರೋಪಿ ಸನ್ಯಾಸಿಯನ್ನು ಭೇಟಿ ಮಾಡಲು ಹೋಗಿದ್ದರು. ಮೊದಲು ಸಂತ್ರಸ್ತೆಯ ಅತ್ತಿಗೆ ರೂಮಿಗೆ ಹೋಗಿದ್ದಾರೆ. ಆಗ ಸನ್ಯಾಸಿ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ನಂತರ ಸಂತ್ರಸ್ತೆ ರೂಮಿಗೆ ಹೋಗಿದ್ದು, ಈ ವೇಳೆ ಆರೋಪಿ ನಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಒಂದು ವೇಳೆ ಈ ವಿಚಾರವನ್ನು ಕುಟುಂಬದವರಿಗೆ ಹೇಳಿದರೆ ನನ್ನ ಅಧಿಕಾರವನ್ನು ಬಳಸಿಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಇನ್ಸ್‌ಪೆಕ್ಟರ್ ಲಕ್ಷ್ಮಣ್ ಗೌರ್ ಹೇಳಿದರು. ಸಂತ್ರಸ್ತೆ ಮನೆಗೆ ಹಿಂದಿರುಗಿದ ನಂತರ ನಡೆದ ಘಟನೆಯನ್ನು ಕುಟುಂಬದವರ ಬಳಿ ಹೇಳಿದ್ದಾರೆ. ತಕ್ಷಣ ಕುಟುಂಬದವರು ಪೊಲೀಸ್ ಠಾಣೆಗೆ ಬಂದು ಸನ್ಯಾಸಿ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿ ಸನ್ಯಾಸಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು ಎಂದು ಲಕ್ಷ್ಮಣ್ ಗೌಡರ್ ತಿಳಿಸಿದರು.

Leave a Reply

Your email address will not be published. Required fields are marked *