ಖಾಸಗಿ ಬಸ್ಸಿನ `ಸಾಮಾಜಿಕ ಅಂತರ’ ಕಂಡು ದಂಗಾದ ಪ್ರಯಾಣಿಕರು!

ಮಂಗಳೂರು: ಒಂದು ಬಸ್ಸಿನಲ್ಲಿ ಸೀಟಿಗೊಬ್ಬರಂತೆ ಮಾತ್ರವೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿ ಮಾಡ್ಲೇಬೇಕು..! ಇತ್ಯಾದಿ ಸರಕಾರಿ ನಿಯಮಾವಳಿಗಳಿದ್ದರೂ ಮೂಡಬಿದ್ರೆ-ಬೆಳ್ತಂಗಡಿ ಮಧ್ಯೆ ಸಂಚಾರ ನಡೆಸೋ ಖಾಸಗಿ ಬಸ್ಸಿನ ಸಾಮಾಜಿಕ ಅಂತರ ಕಂಡು ಜನರು ದಂಗುಬಡಿದು ಹೋಗಿದ್ದಾರೆ. ಇದಕ್ಕೆ ಕಾರಣ ಬಸ್ಸಲ್ಲಿ ಮಹಿಳೆಯರು, ಮಕ್ಕಳೆನ್ನದೆ ಪ್ರಯಾಣಿಕರನ್ನು ಕುರಿಮಂದೆಯಂತೆ ತುಂಬಿಸಿ ಸಂಚಾರ ನಡೆಸುತ್ತಿರುವುದನ್ನು ಸಾರ್ವಜನಿಕರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೂಡಬಿದ್ರೆ-ಬೆಳ್ತಂಗಡಿ ಮಧ್ಯೆ ಸಂಚರಿಸುವ
ಸಜೇಶ್’ ಹೆಸರಿನ ಬಸ್ಸಿನಲ್ಲಿ ಫುಟ್ ಬೋರ್ಡಲ್ಲಿ ಜಾಗವಿಲ್ಲದಿದ್ದರೂ ಪ್ರಯಾಣಿಕರನ್ನು ಕಿಕ್ಕಿರಿದು ತುಂಬಿಸಿ ಸಾಗಿಸಲಾಗುತ್ತಿದೆ. ಒಂದೆಡೆ ಕೊರೊನಾ ಕಾಟ, ಇನ್ನೊಂದೆಡೆ ಜೋರಾದ ಮಳೆಯ ಮಧ್ಯೆ ಬಸ್ಸಲ್ಲಿ ಪ್ರಯಾಣಿಕರು ಪ್ರಾಣ ಕೈಯಲ್ಲಿ ಹಿಡಿದು ಸಂಚಾರ ನಡೆಸುತ್ತಿದ್ದಾರೆ. ಬಸ್ಸುಗಳ ಓಡಾಟಕ್ಕೆ ಜಿಲ್ಲಾಡಳಿತ ಕೆಲವೊಂದು ನಿಬಂಧನೆಗಳನ್ನು ಜಾರಿಗೊಳಿಸಿದ್ದರೂ ಈ ಬಸ್ಸಿನ ಮಾಲಕನಿಗೆ ಅದಾವುದೂ ತಿಳಿದೇ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದ್ದು ಬಸ್ಸಲ್ಲಿ ಸಾಮಾಜಿಕ ಅಂತರವಿಲ್ಲದೆ ಸಂಚಾರ ನಡೆಸುತ್ತಿರುವ ಪ್ರಯಾಣಿಕರ ಪ್ರಾಣಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆಗೆ ಜಿಲ್ಲಾಡಳಿತವೇ ಉತ್ತರಿಸಬೇಕಿದೆ.
