ಖಾಲಿ ಸ್ಟೇಡಿಯಂನಲ್ಲೇ ಐಪಿಎಲ್‌ ಆಯೋಜನೆ? ಆದಾಯಕ್ಕೆ ಕುತ್ತು

ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ವಿಶ್ವದ ಎಲ್ಲಾ ಕ್ರೀಡೆಗಳು ಸ್ಥಗಿತಗೊಂಡಿರುವುದು ಎಲ್ಲರಿಗೂ ತಿಳಿದೇ ಇದೇ. ಅದೇ ರೀತಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಕ್ರಿಕೆಟ್‌ನ್ನು ಮುಂದೂಡಲು ಐಸಿಸಿ ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಐಪಿಎಲ್‌ ಆಡಿಸಲು ಮುಂದಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ನಡೆಸುವ ಸಂಬಂಧ ರಾಜ್ಯದ ಕ್ರಿಕೆಟ್‌ ಮಂಡಳಿಗಳಿಗೆ ಪತ್ರ ಬರೆದು ಅಭಿಪ್ರಾಯ ತಿಳಿಸುವಂತೆ ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಖಾಲಿ ಸ್ಟೇಡಿಯಂನಲ್ಲೇ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದ ಐಪಿಎಲ್‌ ಆದಾಯಕ್ಕೆ ಕುತ್ತು ಬರುವ ಎಲ್ಲಾ ಸಾಧ್ಯತೆಗಳಿವೆ.ಖಾಲಿ ಸ್ಟೇಡಿಯಂನಲ್ಲೂ ನಡೆಸುವ ಬಗ್ಗೆ ಇರಾದೆ ಇದೆ. ಅಭಿಮಾನಿಗಳು, ಫ್ರಾಂಚೈಸಿಗಳು, ಆಟಗಾರರು, ಪ್ರಸಾರದ ಹಕ್ಕು ಪಡೆದುಕೊಂಡವರು, ಆಯೋಜಕರು ಸೇರಿದಂತೆ ಎಲ್ಲರೂ ಈ ವರ್ಷವೇ ಐಪಿಎಲ್‌ ಆಯೋಜಿಸುವ ಸಂಬಂಧ ಎದುರು ನೋಡುತ್ತಿದ್ದಾರೆ ಎಂದು ಗಂಗೂಲಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚಿಗೆ ಭಾರತ ಸೇರಿದಂತೆ ವಿದೇಶದ ಆಟಗಾರರು ಈ ವರ್ಷ ಐಪಿಎಲ್‌ ಆಡಲು ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಶೀಘ್ರವೇ ಟೂರ್ನಿಯನ್ನು ಹೇಗೆ ಆಯೋಜಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಬಿಸಿಸಿಐ ಐಪಿಎಲ್‌ ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದರೂ ವಿಶ್ವಕಪ್‌ ಆಯೋಜನೆ ಬಗ್ಗೆ ಐಸಿಸಿ ನಿರ್ಧಾರ ಸ್ಪಷ್ಟವಾಗಿರಲಿಲ್ಲ. ಬುಧವಾರ ಐಸಿಸಿಯ ಸಭೆ ನಡೆದಿತ್ತು. ಈ ವೇಳೆ ವಿಶ್ವಕಪ್‌ ಆಯೋಜನೆ ಕುರಿತು ಐಸಿಸಿಯ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಐಪಿಎಲ್‌ ಆಯೋಜನೆ ಕುರಿತು ಸೌರವ್‌ ಗಂಗೂಲಿ ಈಗ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಗಂಗೂಲಿ ಇನ್ನು ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ ಬಿಸಿಸಿಐ ಆಯೋಜಿಸುವ ದೇಶೀಯ ಟೂರ್ನಿಯಲ್ಲೂ ಬದಲಾವಣೆ ತರಲಾಗುವುದು ಎಂದು ಹೇಳಿದ್ದಾರೆ. ಮುಂದಿನ ದಿನದಲ್ಲಿ ಈ ಬಗ್ಗೆ ಪೂರ್ಣವಾದ ವಿವರಗಳನ್ನು ನೀಡಲಾಗುವುದು ತಿಳಿಸಿದ್ದಾರೆ. ಪಂದ್ಯದ ಟಿಕೆಟ್‌ ಮಾರಾಟದಿಂದ ಪ್ರಾಂಚೈಸಿಗಳಿಗೆ ಮತ್ತು ಬಿಸಿಸಿಐಗೆ ದುಡ್ಡು ಬರುತ್ತಿತ್ತು. ಆದರೆ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಆಯೋಜಿಸಿದರೆ ಪ್ರೇಕ್ಷಕರು ಬಾರದೇ ಇರುವ ಕಾರಣ ಈ ಹಣ ಬರುವುದಿಲ್ಲ. ಬಿಸಿಸಿಐ ಅತಿ ಹೆಚ್ಚು ಹಣ ಟಿವಿ ಮತ್ತು ಡಿಜಿಟಲ್‌ ಪ್ರಸಾರದಿಂದ ಬರುತ್ತದೆ. ಇದರ ಜೊತೆ ಬೌಂಡರಿ ಬಳಿ ಇರುವ ಡಿಜಿಟಲ್‌ ಬೋರ್ಡ್‌ ಜಾಹೀರಾತು, ಬೌಂಡರಿ ಗೆರೆಯ ಲೈನ್‌ ಮೇಲೂ ಜಾಹೀರಾತು ಇರುತ್ತದೆ.

Leave a Reply

Your email address will not be published. Required fields are marked *