ಕೊಲ್ಲೂರು ಅಭಯಾರಣ್ಯದಲ್ಲಿ ಮರಗಳ ಮಾರಣಹೋಮ, ಕ್ವಾಟ್ರಸ್ ಪಕ್ಕದಲ್ಲೇ ಮರಗಳಿಗೆ ಕೊಡಲಿ!

ಮಂಗಳೂರು: ಕೊಲ್ಲೂರು ಅಭಯಾರಣ್ಯ ವ್ಯಾಪ್ತಿಯ ಹೊಸಂಗಡಿ ಬಳಿಯ ಜಡ್ಡು ಎಂಬಲ್ಲಿ ಮರಗಳ್ಳತನ ವ್ಯಾಪಕವಾಗಿ ನಡೆಯುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕೂತಿದ್ದಾರೆ ಎಂದು ಪರಿಸರಪ್ರಿಯರು ಆರೋಪ ಮಾಡಿದ್ದಾರೆ. ಹೊಸಂಗಡಿ ಅಭಯಾರಣ್ಯದಲ್ಲಿರುವ ಅರಣ್ಯ ಇಲಾಖೆಯ ಕ್ವಾಟ್ರಸ್ ಪಕ್ಕದಲ್ಲೇ ಮರಗಳನ್ನು ಕಡಿದು ಹಾಕಲಾಗಿದೆ. ರಾತ್ರಿ ವೇಳೆ ನಾಲ್ವರು ಕಾವಲು ಕಾಯುತ್ತಿದ್ದರೂ ಮರಗಳ್ಳತ ನಡೆಯುತ್ತಿದ್ದು ಇದರಲ್ಲಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಅವರೂ ದಂಧೆಯಲ್ಲಿ ಶಾಮೀಲಾಗಿದ್ದಾರೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಆಹಾರಕ್ಕಾಗಿ ಆಮೆಯನ್ನು ಹಿಡಿಯಲು ಕಾಡಿಗೆ ಹೋದ ಮುಗ್ಧರನ್ನು ಬಂಧಿಸಿ ಕೇಸ್ ಜಡಿಯುತ್ತಾರೆ, ಕಾಡುಹಂದಿಯನ್ನು ಸಾರು ಮಾಡಿ ತಿಂದವರನ್ನು ಹಿಡಿದು ಕೇಸ್ ಮಾಡುತ್ತಾರೆ, ಕಟ್ಟಿಗೆ ತರಲು ಕಾಡಿಗೆ ಹೋದ ವೃದ್ಧರ ಕತ್ತಿಯನ್ನು ಕಸಿಯುತ್ತಾರೆ. ಆದರೆ ಇವರ ಕಣ್ಣೆದುರೇ ಮರಗಳ್ಳತನ ನಡೆಯುತ್ತಿರುವುದು ಇವರಿಗೆ ತಿಳಿಯುತ್ತಿಲ್ಲವೇ ಎನ್ನುವುದು ಜನರ ಪ್ರಶ್ನೆ. ಬೆಲೆಬಾಳುವ ಅಂಡಾರು, ಮತ್ತಿ ಮುಂತಾದ ಮರಗಳು ನಾಪತ್ತೆಯಾಗಿದ್ದು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಾಗಿದೆ.

Leave a Reply

Your email address will not be published. Required fields are marked *