`ಕೊರೊನಾ ಹೆಸರಲ್ಲಿ ಸರ್ಕಾರ ಲೂಟಿ, ಹಾಸನ ಜನರು ದಂಗೆ ಏಳ್ತಾರೆ’

ಹಾಸನ:
ಕೊರೊನಾ ವೈರಸ್ ಹೆಸರಿನಲ್ಲಿ ರಾಜ್ಯ ಸರ್ಕಾರ ಜನರ ಲೂಟಿಗಿಳಿದಿದೆ. ಸರಕಾರ ಹಾಸನ ಜಿಲ್ಲೆಗೆ ಮೋಸ ಮಾಡುತ್ತಾ ಬಂದಿದ್ದು ಹೀಗೇ ಆದರೆ ಮುಂದೆ ಹಾಸನ ಜನರು ದಂಗೆ ಏಳ್ತಾರೆ’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿಇಂದು ಸಂಜೆ ಮಾತಾಡಿದ ರೇವಣ್ಣ ಅವರು, ಹಾಸನ ಜಿಲ್ಲೆಯ ಜನರು ದಂಗೆ ಎದ್ದರೆ ಬಿಜೆಪಿ ಸರ್ಕಾರ ಉಳಿಯಲ್ಲ. ಜನರ ಶಾಪ ಸರ್ಕಾರಕ್ಕೆ ಒಳ್ಳೆಯದಲ್ಲ' ಎಂದರು.
ಸಿಎಂ ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ. ಆದರೆ ಈಗ ನನ್ನ ಮಾತಿಗೆ ಬೆಲೆ ಕೊಡುತ್ತಿಲ್ಲ. ಬಿಜೆಪಿ ಪಕ್ಷ ಲೂಟಿಕೋರರಿಂದ ತುಂಬಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಶಾಶ್ವತವಾಗಿ ಅಧಿಕಾರದಲ್ಲಿ ಇರ್ತಾರಾ?’ ಎಂದು ರೇವಣ್ಣ ಪ್ರಶ್ನಿಸಿದ್ದಾರೆ.
ಹೊಸಳ್ಳಿ ಎಂಜಿನಿಯರಿಂಗ್ ಕಾಲೇಜು ಹಾಸನಕ್ಕೆ ಸ್ಥಳಾಂತರಿಸಲು ಸರ್ಕಾರ ಆದೇಶ ನೀಡಿದೆ. ಕಾಲೇಜು ಮುಚ್ಚುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ. ಒಂದೊಮ್ಮೆ ಮುಚ್ಚಿದರೆ ನಾನು ಸಿಎಂ ಮನೆ ಮುಂದೆ ಧರಣಿ ಕೂರುತ್ತೇನೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರ ವರ್ಗಾವಣೆಗೆ ಸಿಎಂ 50 ಲಕ್ಷ ಪಡೆದಿದ್ದಾರೆ ಎಂದು ರೇವಣ್ಣ ಬಹಿರಂಗ ಆರೋಪ ಮಾಡಿದ್ದಾರೆ.