ಕೊರೊನಾ ಮಹಾಮಾರಿಗೆ ಎಎಸ್ಐ ಬಲಿ
ಬೆಂಗಳೂರು: ಇಬ್ಬರು ಪೊಲೀಸ್ ಅಧಿಕಾರಿಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು ಅವರಲ್ಲಿ ಓರ್ವ ಎಎಸ್ ಐ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರು ನಗರದ ವಿವಿ ಪುರಂ ಠಾಣೆಯ ಟ್ರಾಫಿಕ್ ಎಎಸ್‍ಐ ಥಣಿಸಂದ್ರದಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರ ಗಂಟಲು ದ್ರವದ ಮಾದರಿಯ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ಮೃತ ಎಎಸ್‍ಐ ಇದೇ ತಿಂಗಳ ಜೂನ್ 30ರಂದು ಸೇವೆಯಿಂದ ನಿವೃತ್ತಿ ಪಡೆಯಲಿದ್ದರು. ಇವರು ಠಾಣಾ ವ್ಯಾಪ್ತಿಯ ಕಂಟೈನ್ಮೆಂಟ್ ಝೋನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದರಿಂದಾಗಿ ಇವರಲ್ಲಿ ಸೋಂಕು ಹರಡಿರುವ ಸಾಧ್ಯತೆಯಿದೆ. ಇದೇ ಠಾಣೆಯ ಮತ್ತೋರ್ವ ಎಎಸ್‍ಐಗೂ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ 59 ವರ್ಷದ ಎಎಸ್‍ಐ ಶೀತ, ಜ್ವರ, ನೆಗಡಿಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇತರ ಪೊಲೀಸ್ ಸಿಬ್ಬಂದಿಗೆ ಆತಂಕ ಶುರುವಾಗಿದೆ. ಠಾಣೆಗೆ ಭೇಟಿ ನೀಡಿರುವವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.