ಕೊರೊನಾಗೆ ಮತ್ತೊಬ್ಬ  
ಪಾಕ್‌ ಕ್ರಿಕೆಟಿಗ ಮೃತ್ಯು

ಇಸ್ಲಾಮಾಬಾದ್: ಕೊರೊನಾ ಮಹಾಮಾರಿಗೆ ವಿಶ್ವಾದ್ಯಂತ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ. ಇದೀಗ ಹೆಮ್ಮಾರಿ ಕೊರೊನಾ ವೈರಸ್‍ಗೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಮೃತಪಟ್ಟಿದ್ದು, ಈ ಮಹಾಮಾರಿಗೆ ಮೃತಪಟ್ಟ ಪಾಕ್‌ನ ಎರಡನೇ ಆಟಗಾರರಾಗಿದ್ದಾರೆ. ರಿಯಾಝ್ ಶೇಖ್ ಅವರಿಗೂ ಮುನ್ನ ಪಾಕಿಸ್ತಾನದ ಕ್ರಿಕೆಟರ್ ಝಾಫರ್ ಸರ್ಫರಾಝ್ ಕೊಡೊನಾ (50) ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್‍ನಲ್ಲಿ ಮೃತಪಟ್ಟಿದ್ದರು. ಈ ಮೂಲಕ ಸರ್ಫರಾಝ್ ಅವರು ಪಾಕಿಸ್ತಾನದಲ್ಲಿ ಕೊರೊನಾ ವೈರಸ್‍ಗೆ ಬಲಿಯಾದ ಮೊದಲ ಕ್ರಿಕೆಟರ್ ಆಗಿದ್ದಾರೆ.
ರಿಯಾಝ್ ಶೇಖ್ (51) ಕೊರೊನಾಗೆ ಮೃತಪಟ್ಟ ಪಾಕ್‌ ಮಾಜಿ ಕ್ರಿಕೆಟ್‌ ಆಟಗಾರ. ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್‍ಕೀಪರ್ ರಶೀದ್ ಲತೀಪ್ ಅವರು ಟ್ವಿಟ್ ಮೂಲಕ ರಿಯಾಝ್ ಶೇಖ್ ನಿಧನವನ್ನು ಖಚಿತಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಬುಧವಾರ ಬೆಳಗ್ಗಿನ ಮಾಹಿತಿ ಪ್ರಕಾರ, 76,398 ಜನರಿಗೆ ಸೋಂಕು ದೃಢಪಟ್ಟಿದ್ದು, 1,621 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ 27,110 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 2003ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಪರ ಆಡಿದ್ದ ಅನುಭವಿ ವಿಕೆಟ್‍ಕೀಪರ್, ಬ್ಯಾಟ್ಸ್‌ಮನ್ ತೌಫಿಕ್ ಉಮರ್ ಅವರಿಗೂ ಕೊರೊನಾ ವೈರಸ್ ತಗಲಿದೆ. ಕೋವಿಡ್-19 ಸೋಂಕು ತಗುಲಿದ್ದ ರಿಯಾಝ್ ಶೇಖ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ. ರಿಯಾಝ್ 1987ರಿಂದ 2005ರವರೆಗೆ 43 ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದು, ದೇಶಿ ಟೂರ್ನಿಗಳಲ್ಲಿ 25 ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿದ್ದಾರೆ. ಸ್ಪಿನ್ ಬೌಲರ್ ಆಗಿದ್ದ ರಿಯಾಝ್ ಶೇಖ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹ್ಸೀನ್ ಖಾನ್ ಅವರ ಕ್ರಿಕೆಟ್ ಅಕಾಡೆಮಿಯಲ್ಲಿ ಮುಖ್ಯ ಕೋಚ್ ಆಗಿ ಕೆಲಸ ಮಾಡುತ್ತಿದ್ದರು. 

Leave a Reply

Your email address will not be published. Required fields are marked *