ಕೆಆರ್‍ಎಸ್ ಡ್ಯಾಂ ಬಳಿ ರೇವ್ ಪಾರ್ಟಿ: ನಾಗರಿಕರ ಆಕ್ರೋಶ
ಮಂಡ್ಯ: ಕೊರೊನಾ ಮಹಾಮಾರಿಗೆ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿರುವ ನಡುವೆ ಮಂಡ್ಯದ ಕೆಆರ್‍ಎಸ್ ಡ್ಯಾಂ ಪಕ್ಕದಲ್ಲೇ ಬೆಂಗಳೂರಿನ ಕೆಲ ಶ್ರೀಮಂತ ವ್ಯಕ್ತಿಗಳು ರೇವ್ ಪಾರ್ಟಿ ನಡೆಸಿದ್ದು, ಸ್ಥಳೀಯ ನಾಗರಿಕರ ಆಕ್ರೊಶಕ್ಕೆ ಗುರಿಯಾಗಿದ್ದಾರೆ.
ಮೈಸೂರು ಮೂಲದ ಸಂಜಯ್ ಎಂಬವರಿಗೆ ಸೇರಿದ ತೋಟ ಇದಾಗಿದ್ದು, ಕೊರೊನಾ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಇದನ್ನು ತಡರಾತ್ರಿಯಲ್ಲಿ ಕೇಳಲು ಹೋದ ಸಾರ್ವಜನಿಕರಿಗೆ ಆವಾಜ್ ಹಾಕಿದ್ದಾರೆ. ಬೆಂಗಳೂರಿನ ಶ್ರೀಮಂತ ವ್ಯಕ್ತಿಗಳು ರಾತ್ರಿ ಕಾರಿನಲ್ಲಿ ಆಗಮಿಸಿದ್ದರು. ಅವರಿಗಾಗಿ ಆರ್ಕೆಸ್ಟ್ರಾ, ಧ್ವನಿವರ್ಧಕ ಬಳಸಿ ಮತ್ತು ಪೆಂಡಾಲ್ ಹಾಕಿ ಎಣ್ಣೆ ಪಾರ್ಟಿ ಆಯೋಜಿಸಲಾಗಿತ್ತು. ಠಾಣೆ ಸಮೀಪದಲ್ಲೇ ಪಾರ್ಟಿ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೊರೊನಾ ವಾರಿಯರ್ಸ್ ಪದೇ ಪದೇ ನಾಗರಿಕರಲ್ಲಿ ಕೇಳುತ್ತಿದೆ. ಆದರೆ ಕೆಆರ್‍ಎಸ್ ಬಳಿ ನಡೆದ ರೇವ್ ಪಾರ್ಟಿಯಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿಲ್ಲ, ಅಲ್ಲದೆ ಮಾಸ್ಕ್ ಕೂಡ ಧರಿಸಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ.