ಕುಸಿದ ಬೃಹತ್ ನೀರಿನ ಟ್ಯಾಂಕ್: ತಪ್ಪಿದ ಅನಾಹುತ

ಚಾಮರಾಜನಗರ: ನೀರಿನ ಬೃಹತ್ ಟ್ಯಾಂಕ್ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದಂತಾಗಿದೆ. ಚಾಮರಾಜನಗರದ ತಾಲೂಕು ಕಚೇರಿ ಹಿಂಭಾಗದಲ್ಲಿ ಘಟನೆ ನಡೆದಿದ್ದು, ತಾಲೂಕು ಕಚೇರಿ ಹಿಂಭಾಗದಲ್ಲಿರುವ ಚನ್ನಿಪುರಮೋಳೆ ಹೊಸಬಡಾವಣೆಯಲ್ಲಿದ್ದ ನೀರಿನ ಬೃಹತ್ ಟ್ಯಾಂಕ್ ಕುಸಿದಿದೆ. ಇಂದು ಬೆಳಗಿನ ಜಾವ ಘಟನೆ ನಡೆದಿದ್ದು, ಪಕ್ಕದ ಮನೆಗಳ ಮೇಲೆ ಕುಸಿದುಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇದು ತುಂಬಾ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಆಗಿದ್ದು, 50 ಸಾವಿರ ಲೀ. ಸಾಮಥ್ರ್ಯದ ಟ್ಯಾಂಕ್ ಆಗಿದೆ. ಟ್ಯಾಂಕ್ ಶಿಥಿಲಗೊಂಡಿದ್ದರೂ ನಗರಸಭೆ ನೀರು ತುಂಬಿಸಿ ಸರಬರಾಜು ಮಾಡುತ್ತಿತ್ತು. ಟ್ಯಾಂಕ್ ತೆರವುಗೊಳಿಸುವಂತೆ ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೂ ತೆರವುಗೊಳಿಸದೆ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಇಂದು ಟ್ಯಾಂಕ್ ಕುಸಿದಿದೆ. ನಗರದ ಮಧ್ಯದಲ್ಲೇ ಇರುವ ಟ್ಯಾಂಕ್ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಕ್ಕೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.