ಕಾಶ್ಮೀರದ ವಿದ್ಯಾರ್ಥಿಗಳಿಗೆ ಜಾಮೀನು ಪ್ರಕರಣ: ಇನ್ಸ್‌ಪೆಕ್ಟರ್‌ ಅಮಾನತು

ಹುಬ್ಬಳ್ಳಿ: ಕೆಲತಿಂಗಳ ಹಿಂದೆ ನಗರದ ಕೆಎಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಜಾಮೀನು ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪ ತೋರಿದ ಇನ್ಸ್‌ಪೆಕ್ಟರ್ ಜಾಕ್ಸನ್‌ ಡಿಸೋಜಾ ಅವರನ್ನು ಇದೀಗ ಅಮಾನತು ಮಾಡಲಾಗಿದೆ. 90 ದಿನದಲ್ಲಿ ಚಾರ್ಜ್ ಶೀಟ್ ದಾಖಲಿಸಬೇಕಾದ ಗ್ರಾಮೀಣ ಪೊಲೀಸರು 109 ದಿನಗಳ ನಂತರ ಚಾರ್ಜ್ ಶೀಟ್ ಸಲ್ಲಿಸಿರುವುದರಿಂದ ಆರೋಪಿಗಳು ಜಾಮೀನಿನ ಮೇಲೆ ಹೊರ ಬರುವಂತಾಯಿತು ಎಂಬ ಆರೋಪ ಕೇಳಿ ಬಂದಿತ್ತು.
ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಅವರು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಜಾಕ್ಸನ್ ಡಿಸೋಜಾರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 90 ದಿನದೊಳಗೆ ಪ್ರಕರಣದ ಜಾರ್ಜ್ ಶೀಟ್ ಸಲ್ಲಿಸದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ 2ನೇ ಜೆಎಂಎಫ್‍ಸಿ ನ್ಯಾಯಾಲಯದಿಂದ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಹೀಗಾಗಿ ಪ್ರಕರಣದಲ್ಲಿ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರ ನಿರ್ಲಕ್ಷ ಕಂಡು ಬಂದಿತ್ತು. ಆದ್ದರಿಂದ ಕರ್ತವ್ಯ ಲೋಪ, ನಿರ್ಲಕ್ಷ್ಯತನಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್ ಡಿಸೋಜಾರನ್ನು ಅಮಾನತು ಮಾಡಲಾಗಿದೆ. ಗುರುವಾರ ದೇಶದ್ರೋಹಿ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರಾಗಿದೆ. ಹುಬ್ಬಳ್ಳಿಯ ಜೆಎಂಎಫ್‍ಸಿ-2 ನ್ಯಾಯಾಲಯ ಜಾಮೀನಿನ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡಿದೆ. ಪೊಲೀಸರ ನಿರ್ಲಕ್ಷ್ಯ ಹಾಗೂ ಸೋಮಾರಿತನದಿಂದ ದೇಶದ್ರೋಹಿ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದು ಯುವ ವಕೀಲರ ಸಂಘದ ಅಧ್ಯಕ್ಷ ಅಶೋಕ್ ಅಣವೇಕರ ಆರೋಪಿಸಿದ್ದರು. ಹುಬ್ಬಳ್ಳಿ ಗ್ರಾಮೀಣ ಪೊಲೀಸರು ನಿಗದಿತ ಸಮಯದಲ್ಲಿ ಚಾರ್ಜ್ ಶೀಟ್ ಸಲ್ಲಿಸದೇ ಇರುವುದರಿಂದ ಮಾನ್ಯ ನ್ಯಾಯಾಲಯ ಆರೋಪಿಗಳಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದು ದೂರಿದ್ದರು.

Leave a Reply

Your email address will not be published. Required fields are marked *