“ಕಾಫಿ ಡೇ” ಸಿದ್ಧಾರ್ಥ್ ಪುತ್ರನ ವರಿಸಲಿದ್ದಾರೆ ಡಿಕೆಶಿ ಮಗಳು!?

ಬೆಂಗಳೂರು: ಕನಕಪುರದ ಬಂಡೆ ಎಂದೇ ಕರೆಯಲ್ಪಡುವ ರಾಜ್ಯ ರಾಜಕಾರಣದ ವರ್ಣರಂಜಿತ ರಾಜಕಾರಣಿ ಡಿಕೆ ಶಿವಕುಮಾರ್ ಕೊನೆಗೂ ಪುತ್ರಿಯ ಮದುವೆ ಮಾಡಿಸಲು ಮನಸು ಮಾಡಿದ್ದು ರಾಜ್ಯದ ಶ್ರೀಮಂತ ಉದ್ಯಮಿಯಾಗಿದ್ದು ಕಾಫಿ ಡೇ ಮೂಲಕ ಜಗತ್ತಿಗೆ ಪರಿಚಿತರಾಗಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಸಿದ್ದಾರ್ಥ್ ಪುತ್ರ ಅಮರ್ಥ್ಯನ ಜೊತೆ ಮದುವೆ ಮಾತುಕತೆ ನಡೆದಿದೆಯಂತೆ. ಹೀಗೊಂದು ಸುದ್ದಿ ಡಿಕೆಶಿ ಆಪ್ತವಲಯದಲ್ಲಿ ಹರಿದಾಡುತ್ತಿದೆ. ತನ್ನ ಹಿರಿಮಗಳಾದ ಐಶ್ವರ್ಯಳ ಮದುವೆಯನ್ನು ಡಿ.ಕೆ ಶಿವಕುಮಾರ್ ಕಾಫಿಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಅವರ ಹಿರಿಯ ಪುತ್ರನ ಜೊತೆ ಮಾಡಲು ಮುಂದಾಗಿರೋದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೂ ಕಾರಣವಾಗಿದೆ.
ಡಿ.ಕೆ ಶಿವಕುಮಾರ್ ಸಿದ್ಧಾರ್ಥ ಹಿಂದಿನಿಂದಲೂ ಉತ್ತಮ ಸ್ನೇಹಿತರು, ವ್ಯವಹಾರದಲ್ಲಿ ಪಾಲುದಾರರು ಕೂಡ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದಾರ್ಥ ನಡುವೆ ಮೊದಲಿಂದಲೂ ಉತ್ತಮ ಸ್ನೇಹ-ಬಾಂಧವ್ಯವಿತ್ತು. ಕಾಫಿಡೇ, ಬಾಗಮಾನೆ ವೆಂಚರ್ಸ್, ಗ್ಲೋಬಲ್ ವಿಲೇಜ್ ಹೀಗೆ ಸಿದ್ಧಾರ್ಥ ಒಡೆತನದ ಎಲ್ಲ ವ್ಯವಹಾರದಲ್ಲಿ ಡಿಕೆಶಿ ಪಾಲುದಾರರಾಗಿದ್ದರು. ಸಿದ್ದಾರ್ಥ್ ಸಾಲದ ಸುಳಿಗೆ ಸಿಕ್ಕಿ ಅಸಹಜ ಸಾವನ್ನಪ್ಪಿದಾಗ ಅತೀ ಹೆಚ್ಚು ದುಃಖಿಯಾಗಿದ್ದಲ್ಲದೆ ಅವರ ಅಂತ್ಯಸಂಸ್ಕಾರದವರೆಗೆ ಕುಟುಂಬದ ಜೊತೆಗಿದ್ದವರು ಇದೇ ಡಿಕೆ ಶಿವಕುಮಾರ್. ಕಾಫಿ ಡೇ ಸಾಮ್ರಾಜ್ಯ ಸಾಲದ ಸುಳಿಗೆ ಸಿಲುಕಿ ಹರಾಜಾಕಾಗುವ ಮಟ್ಟಕ್ಕೆ ಬಂದಾಗ ಸರ್ಕಾರದ ಮಟ್ಟದಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಿ ರಕ್ಷಿಸಿದ್ದು ಕೂಡ ಡಿಕೆಶಿ ಎನ್ನಲಾಗುತ್ತಿದೆ.
ಡಿ.ಕೆ.ಶಿವಕುಮಾರ್ ಸಿದ್ಧಾರ್ಥ ಕುಟುಂಬದ ಸಂಬಂಧವನ್ನು ಬೀಗರ ಸಂಬಂಧವಾಗಿ ಮಾಡಿಕೊಳ್ಳುತ್ತಾರೆ ಎಂಬ ಮಾತು ಸದ್ಯ ಪ್ರಚಲಿತದಲ್ಲಿದೆ. ಸಿದ್ದಾರ್ಥರ ಮಾವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಕಾಲಘಟ್ಟದಿಂದಲೂ ಡಿಕೆಶಿ ಕುಟುಂಬಕ್ಕೆ ಆಪ್ತರು ಬೇರೆ. ಇವತ್ತಿಗೂ ಪಕ್ಷ ಬೇರೆಯಾಗಿದ್ರೂ ಹೇಳಿದ ಮಾತನ್ನು ಮೀರೋ ಪ್ರಶ್ನೆ ಇಲ್ಲ ಅಂತಂದ್ರೆ ತನ್ನ ರಾಜಕೀಯ ಗುರು-ಮಾರ್ಗದರ್ಶಿ ಎಸ್.ಎಂ.ಕೃಷ್ಣ ಮಾತನ್ನು ಮಾತ್ರ. ಸದ್ಯ ಡಿಕೆಶಿ ಮಗಳು ಐಶ್ವರ್ಯ ಹಾಗೂ ಅಮರ್ಥ್ಯ ವಿವಾಹಕ್ಕೆ ಪೂರಕವಾದ ಎಲ್ಲಾ ಸಿದ್ಧತೆ ಎರಡು ಕುಟುಂಬಗಳ ನಡುವೆ ನಡೆಯುತ್ತಿದೆ ಎನ್ನಲಾಗಿದೆ. ಮಾತುಕತೆ ನಿರ್ಣಾಯಕ ಹಂತ ಕೂಡ ತಲುಪಿದೆ ಎನ್ನಲಾಗಿದೆ. ಸಿದ್ದಾರ್ಥ್ ಆತ್ಮಹತ್ಯೆ ಸಂದರ್ಭದಲ್ಲಿ ಡಿಕೆಶಿ ಮಗಳ ಹೆಸರು ಕೂಡ ಪ್ರಕರಣದಲ್ಲಿ ಥಳುಕು ಹಾಕಿಕೊಂಡಿದ್ದನ್ನು ನೀವು ಸ್ಮರಿಸಬಹುದು.

Leave a Reply

Your email address will not be published. Required fields are marked *