ಕಳಪೆ ಪಡಿತರ ಸರಬರಾಜು ವಿರುದ್ಧ ಕಠಿಣ ಕ್ರಮ: ಕೆ.ಗೋಪಾಲಯ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆ: ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಪಡಿತರ ವಿತರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಗೋಪಾಲಯ್ಯ ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಟಿಎಪಿಸಿಎಂಎಸ್ ಆಹಾರ ಧಾನ್ಯ ಸಗಟು ಗೋದಾಮಿಗೆ ಇಂದು ದಿಢೀರ್ ಭೇಟಿ ನೀಡಿ ಅಕ್ಕಿ, ಗೋಧಿ, ತೊಗರಿಬೇಳೆ ಮತ್ತು ಕಡಲೆಕಾಳುಗಳನ್ನು ಮೂಟೆಗಳನ್ನು ಬಿಚ್ಚಿ ಖುದ್ದು ಪರಿಶೀಲನೆ ನಡೆಸಿದರು.
ಗ್ರಾಹಕರಿಗೆ ವಿತರಿಸಲು ದಾಸ್ತಾನು ಮಾಡಿದ್ದ ಕಡಲೆಕಾಳಿನ ಮೂಟೆಯಲ್ಲಿ ಕಸಕಡ್ಡಿ ಕಂಡುಬಂದಿದ್ದರಿಂದ ಗುಣಮಟ್ಟವಿಲ್ಲದ ಕಾಳುಗಳ ವಿತರಣೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಇಲಾಖೆ ಉಪನಿರ್ದೇಶಕ ಆರ್.ಡಿ.ಸುಬ್ರಹ್ಮಣ್ಯ ಅವರಿಗೆ ಆದೇಶಿಸಿದರು ಹಾಗೂ ಪಡಿತರ ವಿತರಣೆಗೂ ಮುನ್ನ ಪರಿಶೀಲಿಸಬೇಕು ಹಾಗೂ ಕಡಲೆ ಕಾಳಿನಲ್ಲಿನ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಗಟು ಗೋದಾಮುಗಳಿಗೆ ಸಾಗಿಸಿರುವ ಆಹಾರ ಧಾನ್ಯಗಳಲ್ಲಿ ಕಳಪೆ ಮಟ್ಟದ ಬೇಳೆ ಕಾಳುಗಳು ಸರಬರಾಜಾಗಿರುವ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಕಡೆ ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕಳಪೆ ಪಡಿತರ ಸರಬರಾಜು ಮಾಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಹಾಗೆಯೇ ಗುಣಮಟ್ಟವಿಲ್ಲದ ಕಾಳುಗಳನ್ನು ಹಿಂಪಡೆದು ಗುಣಮಟ್ಟದ ಬೇಳೆ ಕಾಳು ಪೂರೈಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು. ಕಾಳು ಹೊರತುಪಡಿಸಿ ಉಳಿದೆಲ್ಲ ಪಡಿತರ ಗುಣಮಟ್ಟದ್ದಾಗಿದೆ. ಹೊಸಕೋಟೆ ಟಿಎಪಿಸಿಎಂಎಸ್ ಗೋದಾಮು ನಿರ್ವಹಣೆ ಉತ್ತಮವಾಗಿದೆ. ಇಲ್ಲಿನ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸಕೋಟೆ ತಹಶೀಲ್ದಾರ್ ಗೀತಾ, ಟಿಎಪಿಸಿಎಂಎಸ್ ನಿರ್ದೇಶಕ ಉಪ್ಪಾರಳ್ಳಿ ಮುನಿಯಪ್ಪ, ಬಾಬು ರೆಡ್ಡಿ, ಟಿಎಪಿಸಿಎಂಎಸ್ ಸಿಬ್ಬಂದಿ ಸೋಮಶೇಖರ್, ಗೋದಾಮು ಮೇಲ್ವಿಚಾರಕ ದೇವರಾಜ್ ಮತ್ತಿತರರು ಇದ್ದರು.