ಕರಾವಳಿ ಹುಡುಗಿಯ ಕವರ್‍ಡ್ರೈವ್‍ಗೆ ಭಾರತ ಫಿದಾ!

ಮಂಗಳೂರು: ದೇಶದಲ್ಲಿ ಹೆಚ್ಚಿನ ಯುವಜನತೆ ತಾನೋರ್ವ ದೊಡ್ಡ ಡಾಕ್ಟರ್, ಇಂಜಿನೀಯರ್ ಆಗಬೇಕು ಎನ್ನುವ ಕನಸನ್ನು ಕಾಣುವುದಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಆಟಗಾರನಾಗಿ ವಿಶ್ವದಾದ್ಯಂತ ಮೆರೆಯಬೇಕೆಂಬ ಹಂಬಲ ಹೊಂದಿರುತ್ತಾರೆ. ಆದರೆ ಅನೇಕ ಕಾರಣಾಂತರಗಳಿಂದಾಗಿ ಆ ಕನಸು ಕನಸಾಗಿಯೇ ಉಳಿಯುತ್ತದೆ. ಅದೇ ರೀತಿ ಸಾಮಜಿಕ ಜಾಲತಾಣಗಳಿಂದಾಗಿ ಕೆಲವೊಂದು ಎಳೆಮರೆಯಲ್ಲಿನ ಪ್ರತಿಭೆಗಳು ಕೂಡ ಹೊರಜಗತ್ತಿಗೆ ಪರಿಚಯ ಕೂಡ ಆಗುತ್ತಾರೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಕಾರ್ಕಳದ ಹುಡುಗಿಯೊಬ್ಬಳು ಮನೆಯಲ್ಲೇ ಕ್ರಿಕೆಟ್ ಆಡುತ್ತಿದ್ದ ವೇಳೆ ಹೊಡೆದ ಕವರ್‍ಡ್ರೈವ್ ವಿಡಿಯೋ ತುಣುಕನ್ನು ಇದೀಗ ಕ್ರಿಕೆಟ್ ವೆಬ್‍ಸೈಟ್ ಕ್ರಿಕ್ ಇನ್ಫೋ ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದು, ದೇಶಾದ್ಯಂತ ಅಭಿಮಾನಿಗಳನ್ನು ರಂಚಿಸಿದೆ.
ಉಡುಪಿಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಜ್ಯೋತಿ ಪೂಜಾರಿ ಎಂಬ ಯುವತಿಯೇ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಮೋಘ ಕ್ರಿಕೆಟ್ ಕವರ್ ಶಾಟ್ ಮೂಲಕ ವೈರಲ್ ಆಗಿರುವ ಯುವತಿ. ಜೂನ್ 11ರಂದು ಜ್ಯೋತಿಯ ಆರು ಸೆಕೆಂಡ್‍ಗಳ ಕವರ್‍ಡ್ರೈವ್ ಶಾಟ್‍ನ್ನು ಸದ್ಯ ಕ್ರಿಕ್ ಇನ್ಫೋ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂಥ ಶಾಟ್ ಅನ್ನು ನೀವು ಎಂದಾದರೂ ನೋಡಿದ್ದೀರಾ ಎಂಬ ಶ್ಲಾಘನೆಯ ಕ್ಯಾಪ್ಶನ್ ಕೂಡ ನೀಡಿದೆ. ಮುಂಬೈ ಮೂಲದ ಜ್ಯೋತಿ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದು, ಈ ಸಂದರ್ಭ ಮನೆಯವರ ಜೊತೆ ಕ್ರಿಕೆಟ್ ಆಡಿದ್ದರು. ಈ ಸಂದರ್ಭ ರಂಜಿತ್ ಪೂಜಾರಿ ಎಂಬವರು ಜ್ಯೋತಿ ಹೊಡೆದ ಕವರ್‍ಡ್ರೈವ್ ಶಾಟ್‍ನ ವಿಡಿಯೋ ತುಣುಕನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದರು. ಇದೇ ವಿಡಿಯೋ ತುಣುಕನ್ನೀಗ ಕ್ರಿಕ್‍ಇನ್ಫೋ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ. ಸದ್ಯ ಈ ಕವರ್ ಡ್ರೈವ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲಾಗುತ್ತಿದೆ. ವಿರಾಟ್ ಕೊಹ್ಲಿ, ಪಾಕ್‍ನ ಬಾಬರ್ ಅಜಮ್ ತಮ್ಮ ಅಮೋಘ ಕವರ್‍ಡ್ರೈವ್ ಶಾಟ್‍ಗೆ ಹೆಸರಾಗಿದ್ದಾರೆ. ಆದರೆ ಜ್ಯೋತಿಯ ಕವರ್‍ಶಾಟ್ ನೋಡಿದವರು ಕೂಡ ಇದೀಗ ಈಕೆಯನ್ನು ದಿಗ್ಗಜರ ಜೊತೆ ಹೋಲಿಕೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *