ಕಟೀಲು: ಚಲಿಸುತ್ತಿದ್ದ ಕಾರ್ ಬೆಂಕಿಗಾಹುತಿ, ಪ್ರಯಾಣಿಕರು ಪಾರು

ಬಜ್ಪೆ: ಕಟೀಲು ಸಮೀಪದ ಎಕ್ಕಾರು ಅರಸುಲೆ ಪದವು ಎಂಬಲ್ಲಿ ಚಲಿಸುತ್ತಿದ್ದ ಕಾರ್ ಶಾಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿಗೆ ತುತ್ತಾದ ಘಟನೆ ಇಂದು ಮುಂಜಾನೆ ನಡೆದಿದೆ. ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.
ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಲ್ಲಿದ್ದವರು ಹೊರಗಡೆ ಬರುವಷ್ಟರಲ್ಲಿ ಬೆಂಕಿಯ ಜ್ವಾಲೆ ಇಡೀ ಕಾರನ್ನು ಆವರಿಸಿದ್ದು ಜನವಸತಿ ಇಲ್ಲದ ಪ್ರದೇಶವಾದ್ದರಿಂದ ಯಾರೂ ಇರಲಿಲ್ಲ ಎನ್ನಲಾಗಿದೆ. ಬಳಿಕ ಸ್ಥಳೀಯ ನಿವಾಸಿ ಸ್ಟ್ಯಾನಿ ಪಿಂಟೋ ಎಂಬವರು ತಕ್ಷಣ ಕಾರ್ಯಪ್ರವರ್ತರಾಗಿ ಕಟೀಲ್ ಯತೀಶ್ ಶೆಟ್ಟಿಯವರ ನೀರಿನ ಟ್ಯಾಂಕರ್ ಕರೆಸಿ ಬೆಂಕಿ ನಂದಿಸುವಲ್ಲಿ ಶ್ರಮ ವಹಿಸಿದ್ದಾರೆ. ಅಷ್ಟರಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ಅದೃಷ್ಟವಶಾತ್ ಕಾರಲ್ಲಿದ್ದವರಿಗೆ ಯಾವುದೇ ಅಪಾಯವಾಗಲಿಲ್ಲ. ಸ್ಥಳಕ್ಕೆ ಬಜಪೆ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಕಾರ್ ನಲ್ಲಿದ್ದವರು ಬೆಳ್ತಂಗಡಿ ಮೂಲದವರು ಎಂದು ತಿಳಿದುಬಂದಿದೆ.
