ಐಪಿಎಲ್‌ ಆತಿಥ್ಯಕ್ಕೆ ಎಮಿರೇಟ್ಸ್‌ ಕ್ರಿಕೆಟ್‌ ಮಂಡಲಿ ಆಸಕ್ತಿ

ದುಬೈ: ಕೊರೊನಾ ವೈರಸ್‍ನಿಂದಾಗಿ ಮುಂದೂಡಲ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಆತಿಥ್ಯ ವಹಿಸಿಕೊಳ್ಳಲು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮುಂದೆ ಬಂದಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕಿತರ ಸಂಖ್ಯೆಯಿಂದಾಗಿ ಈ ಬಾರಿ ಭಾರತದಲ್ಲೇ ಟೂರ್ನಿ ನಡೆಯುವುದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಯುಎಇಯಲ್ಲಿ ಟೂರ್ನಿ ನಡೆಸಲು ಬಿಸಿಸಿಐ ಆಸಕ್ತಿ ತೋರಿದೆ. ಇದಕ್ಕೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಅವಕಾಶ ನೀಡುವುದಾಗಿ ಅಧಿಕೃತವಾಗಿ ದೃಢಪಡಿಸಿದೆ.
“ಈ ಹಿಂದೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಯುಎಇಯಲ್ಲಿ ಐಪಿಎಲ್ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಅಷ್ಟೇ ಅಲ್ಲದೆ ವಿವಿಧ ದ್ವಿಪಕ್ಷೀಯ ಮತ್ತು ಬಹು ರಾಷ್ಟ್ರಗಳ ಕ್ರಿಕೆಟ್ ಟೂರ್ನಿಗಳಿಗೆ ಅವಕಾಶ ನೀಡಿದ್ದೇವು. ಈ ಮೂಲಕ ನಾವು ಉತ್ತಮ ಆತಿಥೇಯರು ಎಂದು ಸಾಬೀತಾಗಿದೆ. ಹೀಗಾಗಿ ಐಪಿಎಲ್-13 ಆವೃತ್ತಿ ನಡೆಸಲು ಎಲ್ಲ ರೀತಿಯ ಅವಕಾಶ ಕಲ್ಪಿಸುತ್ತೇವೆ” ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮುಬಾಶ್ಶೀರ್ ಉಸ್ಮಾನಿ ತಿಳಿಸಿದ್ದಾರೆ. ಭಾರತದಲ್ಲಿ ಐಪಿಎಲ್ ನಡೆಯಬೇಕೆಂದು ನಾನು ಬಯಸುತ್ತೇನೆ. ಆದರೆ ಪರಿಸ್ಥಿತಿ ಸುಧಾರಿಸದೇ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಹಿಂದೆ ಹೇಳಿದ್ದರು. ಈಗ ಟೂರ್ನಿ ನಡೆಸಲು ಅವಕಾಶ ನೀಡುವುದಾಗಿ ಮುಂದೆ ಬಂದಿರುವ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಪ್ರಸ್ತಾಪವನ್ನು ಬಿಸಿಸಿಐ ಪರಿಗಣಿಸಬಹುದು ಎನ್ನಲಾಗುತ್ತಿದೆ. ಐಪಿಎಲ್-13ನೇ ಆವೃತ್ತಿ ಮಾರ್ಚ್ 29ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ಲಾಕ್‍ಡೌನ್‍ನ ಮೊದಲ ಹಂತವನ್ನು ವಿಧಿಸಿದ ನಂತರ ಅದನ್ನು ಏಪ್ರಿಲ್ 15ಕ್ಕೆ ಟೂರ್ನಿಯನ್ನು ಮುಂದೂಡಲಾಗಿತ್ತು. ಆದರೆ ಈಗ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಈ ವರ್ಷ ಐಪಿಎಲ್ ನಡೆಯದಿದ್ದರೆ ಬಿಸಿಸಿಐ 4,000 ಕೋಟಿ ರೂ. ನಷ್ಟವನ್ನು ಅನುಭವಿಸಲಿದೆ ಎಂದು ಅಂದಾಜಿಸಲಾಗಿದೆ. 2014ರ ಟೂರ್ನಿಯನ್ನು ವಿದೇಶದಲ್ಲಿ ನಡೆಸಲಾಗಿತ್ತು. ಅದರಂತೆ ಈ ಬಾರಿಯೂ ಯುಎಇಯಲ್ಲಿ ಟೂರ್ನಿ ನಡೆಸಿದರೆ ನಷ್ಟವನ್ನ ತಡೆಯಬಹುದು ಎನ್ನುವುದು ಬಿಸಿಸಿಐ ಲೆಕ್ಕಾಚಾರವಾಗಿದೆ. 

Leave a Reply

Your email address will not be published. Required fields are marked *