ಐಎಎಸ್‌ ಅಧಿಕಾರಿ ವಿಜಯ್‌ ಸಾವಿನ ಸುತ್ತ ಅನುಮಾನದ ಹುತ್ತ

ಬೆಂಗಳೂರು: ಐಎಂಎ ಹಗರಣದಲ್ಲಿ ೧.೫ ಕೋಟಿ ರೂ. ಪಡೆದ ಆರೋಪ ಹೊತ್ತಿದ್ದ ಐಎಎಸ್‌ ಅಧಿಕಾರಿ ವಿಜಯ್‌ ಶಂಕರ್‌ ಆತ್ಮಹತ್ಯೆಯ ಸುತ್ತ ಹತ್ತು ಹಲವು ಅನುಮಾನಗಳು ಮೂಡುತ್ತಿವೆ. ಆತ್ಮಹತ್ಯೆಗೂ ಮುನ್ನ ವಿಜಯ್ ಕುತ್ತಿಗೆಗೆ ನೋವಿನ ಪ್ಯಾಡ್ ಧರಿಸಿದ್ದರು. ಗಟ್ಟಿಯಾಗಿದ್ದ ಪ್ಲಾಸ್ಟಿಕ್ ಪ್ಯಾಡ್ ಮೇಲೆ ಕುತ್ತಿಗೆ ಬಿಗಿದಿದ್ದು ಹೇಗೆ ಎಂಬ ಪ್ರಶ್ನೆ ಇದೀಗ ಮೂಡಲಾರಂಭಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಜಯ್ ಶಂಕರ್, 20 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಮರಳಿದ್ದರು. ನಿನ್ನೆ ಬೆಳಗ್ಗೆ ಕಚೇರಿಯಲ್ಲಿ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೂ ಸಭೆ ನಡೆಸಿದ್ದು, ಲವಲವಿಕೆಯಿಂದಲೇ ಕೆಲಸ ಮಾಡಿದ್ದರು. ಮಧ್ಯಾಹ್ನ ಕಚೇರಿಯಿಂದ ತೆರಳಿದ್ದ ವಿಜಯ್ ಶಂಕರ್ ಮಂಗಳವಾರ ರಾತ್ರಿ ಖಿನ್ನತೆಗೆ ಒಳಗಾಗಿ ನೇಣಿಗೆ ಶರಣಾಗಿದ್ದರು. ಆದರೆ ಸದ್ಯ ಪ್ರಕರಣದ ಬಗ್ಗೆ ಹಲವು ಗೊಂದಲಗಳು ಮೂಡಿದೆ. ಐಎಂಎ ಕೇಸ್‍ನಲ್ಲಿ ಮನ್ಸೂರ್ ಖಾನ್‍ನಿಂದ 1.5 ಕೋಟಿ ರೂ.ಪಡೆದ ಆರೋಪ ವಿಜಯ್ ಶಂಕರ್ ಮೇಲಿತ್ತು. ಈ ಬಗ್ಗೆ 3 ದಿನದ ಹಿಂದೆ ವಿಚಾರಣೆಗೆ ಹಾಜರಾಗಲು ಸಿಬಿಐ ನೋಟಿಸ್ ಕೂಡ ಕೊಟ್ಟಿತ್ತು. ಒಟ್ಟನಲ್ಲಿ ಬಂಧನ ಭೀತಿಯಿಂದ ವಿಜಯ್ ಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಎಸ್.ಐ.ಟಿ ಕೇಸ್ ನಲ್ಲಿ 16ನೇ ಆರೋಪಿಯಾಗಿದ್ದ ವಿಜಯ್ ಶಂಕರ್, ಕೇಸ್ ಸಿಬಿಐಗೆ ವರ್ಗಾವಣೆಯಾದ ನಂತರ 4ನೇ ಆರೋಪಿಯಾಗಿದ್ದರು. ಕೆಲ ದಿನಗಳ ಹಿಂದೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಪ್ರಾಷಿಕ್ಯೂಷನ್ ಗೆ ಸರ್ಕಾರ ಅನುಮತಿ ನೀಡಿದೆ ಎಂಬ ಭಯದಲ್ಲಿದ್ದ ವಿಜಯ್ ಶಂಕರ್, ಇದರಿಂದ ತಪ್ಪಿಸಿಕೊಳ್ಳಲು ಪದೇ ಪದೇ ವಿಧಾನಸೌಧಕ್ಕೂ ಭೇಟಿ ನೀಡಿದ್ದರು ಎಂದು ತಿಳಿದ ಬಂದಿದೆ. ಈಗ ಬಂಧನದ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆಗಳು ವ್ಯಕ್ತವಾಗಿವೆ.

Leave a Reply

Your email address will not be published. Required fields are marked *