ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿರುವ ಕಿಟ್ಟದಕುಪ್ಪೆ ಗ್ರಾಮದ 16 ವಿದ್ಯಾರ್ಥಿಗಳಿಗೆ ಮಾನಸಿಕ ತೊಳಲಾಟ

ಗುಬ್ಬಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಕಲ ಸಿದ್ಧತೆ ನಡೆಯುತ್ತಿದ್ದರೂ ಕಂಟೈನ್ಮೆಂಟ್ ಏರಿಯಾ ಎಂದು ಗುರುತಿಸಲಾದ ತಾಲೂಕಿನ ಕಿಟ್ಟದಕುಪ್ಪೆ ಗ್ರಾಮದ 16 ವಿದ್ಯಾರ್ಥಿಗಳು ಮಾನಸಿಕ ತೊಳಲಾಟದಲ್ಲಿ ಪರೀಕ್ಷೆ ಎದುರಿಸುವ ದುಃಸ್ಥಿತಿ ಎಷ್ಟರ ಮಟ್ಟಿಗೆ ಸರಿ ಎನ್ನುವ ಚರ್ಚೆ ಸಾರ್ವಜನಿಕರಲ್ಲಿ ನಡೆದಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದು ಕಿಟ್ಟದಕುಪ್ಪೆ ಗ್ರಾಮವನ್ನು ಸಂಪೂರ್ಣ ಸೀಲ್‍ಡೌನ್‍ಗೆ ಆದೇಶಿಸಲಾಗಿತ್ತು. ಕಂಟೈನ್ಮೆಂಟ್ ಏರಿಯಾದಲ್ಲೇ 16 ಮಕ್ಕಳು ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದೆ. ಈಗಾಗಲೇ ಮೂರು ತಿಂಗಳು ಕಳೆದು ಒಂದು ರೀತಿ ಬೇಸರಗೊಂಡಿದ್ದ ಈ ಮಕ್ಕಳಿಗೆ ಕೊರೊನಾ ಭೀತಿಯು ಮತ್ತಷ್ಟು ಆತಂಕ ತಂದೊಡ್ಡಿದೆ. ಈ ನಡುವೆ ಪರೀಕ್ಷಾ ಕೇಂದ್ರಕ್ಕೆ ಈ ವಲಯದ ಮಕ್ಕಳು ಹೇಗೆ ಬರಬೇಕಿದೆ. ಒಂದು ಮಾದರಿಯಲ್ಲಿ ಖೈದಿಗಳ ರೀತಿ ಪರೀಕ್ಷಾ ಕೇಂದ್ರಕ್ಕೆ ಬರಲು ವ್ಯವಸ್ಥೆ ಮಾಡಲಾಗಿದೆ. ನಿಟ್ಟೂರು ಕೇಂದ್ರಕ್ಕೆ 10 ವಿದ್ಯಾರ್ಥಿಗಳು ಹಾಗೂ ಗುಬ್ಬಿ ಕೇಂದ್ರಕ್ಕೆ 6 ವಿದ್ಯಾರ್ಥಿಗಳು ತೆರಳಬೇಕಿದೆ.
ಬಸ್ ವ್ಯವಸ್ಥೆ ಮಾಡಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗುವ ಹೊಣೆ ಹೊತ್ತ ಶಿಕ್ಷಣ ಇಲಾಖೆ ಕಂಟೈನ್ಮೆಂಟ್ ವಲಯದ ಮಕ್ಕಳನ್ನು ಹಳ್ಳಿಯಿಂದ ಹೊರ ಕರೆದುಕೊಂಡು ಹೋಗುವ ಬದಲು ಸ್ಥಳೀಯವಾಗಿರುವ ಶಾಲೆಯಲ್ಲಿ 16 ಮಕ್ಕಳ ಪರೀಕ್ಷೆ ಸಿದ್ದತೆ ಮಾಡಬಹುದಿತ್ತು ಬಗ್ಗೆ ಕೆಲವರು ಚರ್ಚೆ ಮಾಡಿದ್ದಾರೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಕಾರ ದಿಢೀರ್ ಹೆಚ್ಚುವರಿ ಪರೀಕ್ಷಾ ಕೇಂದ್ರಕ್ಕೆ ಅವಕಾಶವಿಲ್ಲ. ಈಗಾಗಲೇ 14 ಕೇಂದ್ರ ಸಿದ್ದವಾಗಿದ್ದು, ಈ ಜತೆಗೆ ಹೆಚ್ಚುವರಿ ಮೂರು ಕೇಂದ್ರ ಕೂಡಾ ಸಜ್ಜಾಗಿದೆ. ಪ್ರತಿ ಕೇಂದ್ರದಲ್ಲೂ ಕಂಟೈನ್ಮೆಂಟ್ ವಲಯದ ಮಕ್ಕಳು ಹಾಗೂ ಕ್ವಾರೆಂಟೈನ್ ಆಗಿರುವ ಮಕ್ಕಳಿಗೆ ಅವಕಾಶಕ್ಕಾಗಿಯೇ ಹೆಚ್ಚುವರಿ ಕೊಠಡಿ ವ್ಯವಸ್ಥೆ ಇದೆ. ಆ ಕಾರಣ ಈ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡುವ ಮಾತುಗಳಾಡುತ್ತಾರೆ.
ಈಗಾಗಲೇ ಮಾನಸಿಕವಾಗಿ ಕುಗ್ಗಿರುವ ಕಿಟ್ಟದಕುಪ್ಪೆ ಗ್ರಾಮದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಹೇಗೆ ಸ್ವಾಗತಿಸುತ್ತದೆ. ನಮ್ಮನ್ನು ಬೇರೆ ರೀತಿ ನೋಡುವ ವ್ಯವಸ್ಥೆ ಇರುತ್ತದೆ ಎನ್ನುವ ಅಂಶವೇ ಮತ್ತಷ್ಟು ಮಾನಸಿಕ ಪೆಟ್ಟು ಪರೀಕ್ಷೆ ಫಲಿತಾಂಶದ ಮೇಲೆ ಬೀಳುತ್ತದೆ. ಈ ಜತೆಗೆ ಕೊರೊನಾ ಭೀತಿಯು ಬೇರೆ ಮಕ್ಕಳಲ್ಲೂ ಕಾಣುವ ಕಾರಣ ಅವರ ಗ್ರಾಮದಲ್ಲೇ 16 ಮಕ್ಕಳಿಗೆ ಪರೀಕ್ಷೆ ವ್ಯವಸ್ಥೆ ಮಾಡಲು ಮಾನವಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕರ ಅಧ್ಯಕ್ಷ ಸಿದ್ದಲಿಂಗೇಗೌಡ ಒತ್ತಾಯಿಸಿದ್ದಾರೆ.
ಮಕ್ಕಳ ಭವಿಷ್ಯ ಅತಿ ಮುಖ್ಯ. ಅವರ ಬದುಕಿನ ಬಹುಮುಖ್ಯ ಪರೀಕ್ಷೆಯಾಗಿರುವ ಕಾರಣ ನಿರಾಂತಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಇಲಾಖೆ ಮಾಡಬೇಕು. ಈ ಬಗ್ಗೆ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳಿಗೆ ತಿಳಿಸುವುದಾಗಿ ಹೇಳಿದರು.

Leave a Reply

Your email address will not be published. Required fields are marked *