ಎಕ್ಕಾರ್ ಯುವಕನ ಪ್ರಾಣ ತೆಗೆದ “ಮಕ್ಕರ್”! ಐವರು ಆರೋಪಿಗಳು ಅಂದರ್

ಮಂಗಳೂರು: ಮೊನ್ನೆ ರಾತ್ರಿ ಬಜ್ಪೆ ಠಾಣಾ ವ್ಯಾಪ್ತಿಯ ಎಕ್ಕಾರು ದೇವರಗುಡ್ಡೆ ಬಳಿ ನಡೆದಿರುವ ಎಕ್ಕಾರ್ ನಿವಾಸಿ ಕೀರ್ತನ್(20) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸ್ ತಂಡ ವಶಕ್ಕೆ ಪಡೆದಿದೆ. ಪ್ರಕರಣದಲ್ಲಿ 20ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು ಉಳಿದವರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಘಟನೆಯ ವಿವರ:
ಮೇ 31ರ ರಾತ್ರಿ 7:45ರ ಸುಮಾರಿಗೆ ಘಟನೆ ನಡೆದಿದ್ದು ತಲವಾರಿನಿಂದ ಕಡಿದು ಕೀರ್ತನ್ ಹತ್ಯೆಗೈಯಲಾಗಿತ್ತು. ಈತನ ಜೊತೆಗಿದ್ದ ನಿತಿನ್(20), ಮನೀಶ್(20) ಮೇಲೂ ತಲವಾರಿನಿಂದ ದಾಳಿ ನಡೆದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ತನಿಖೆ ನಡೆಸಿದ ಬಜ್ಪೆ ಠಾಣಾ ಪೊಲೀಸ್ ತಂಡ ಆರೋಪಿಗಳಾದ ಕಳವಾರು ನಿವಾಸಿ ಸುಹಾಸ್(20), ಪಚ್ಚು ಯಾನೆ ಪ್ರಶಾಂತ್(21), ಮೋಕ್ಷಿತ್(20) ದೀಪೇಶ್(21) ಹಾಗೂ ಉಮ್ಮು ಎಂಬಾತನನ್ನು ಬಂಧಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರರು ತಲೆಮರೆಸಿದ್ದಾರೆ. ಎಸಿಪಿ ಬೆಳ್ಳಿಯಪ್ಪ, ಬಜ್ಪೆ ಠಾಣಾ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ಯಾರೋ ಬಾವಿಗೆ ಬಿದ್ದರು, ಇನ್ನಾರಿಗೋ ತಲವಾರು ಬೀಸಿದರು!
ಅಸಲಿಗೆ ಕೀರ್ತನ್ ಕೊಲೆಯಾಗುವಂತ ದೊಡ್ಡ ರೌಡಿ ಶೀಟರ್ ಕೂಡ ಅಲ್ಲ, ಅಂತ ತಪ್ಪನ್ನೂ ಆತ ಮಾಡಿಲ್ಲ. ಹಾಗಿದ್ದರೆ ಕೊಲೆಗೆ ಕಾರಣ ಏನು ಎಂದು ತಿಳಿದ್ರೆ ಇಂದಿನ ಯುವಕರು ಹಿಂದುತ್ವ, ರೌಡಿಯಿಸಂ ಹೆಸರಲ್ಲಿ ಯಾವ ರೀತಿ ಪಾತಕ ಲೋಕಕ್ಕೆ ತಮಗರಿವಿಲ್ಲದೇ ಇಳೀತಾರೆ ಅನ್ನೋದು ಗೊತ್ತಾಗುತ್ತೆ. ಕೀರ್ತನ್ ಸ್ಥಳೀಯವಾಗಿ ಹಿಂದೂ ಸಂಘಟನೆ, ಸಾಮಾಜಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದವ. ಊರಿನ ಮದರಂಗಿ ಕಾರ್ಯಕ್ರಮಗಳಲ್ಲಿ ಕುಡಿದು ಒಂದಿಷ್ಟು ಹಿಂದೂ ಯುವಕರ ಜೊತೆ ಕಾಲುಕೆರೆದು ಗಲಾಟೆ ಮಾಡಿದ್ದು ಬಿಟ್ಟರೆ ಬೇರೆ ಯಾವ ಕ್ರಿಮಿನಲ್ ಹಿಸ್ಟರಿನೂ ಇಲ್ಲ. ಊರಲ್ಲಿ ತಮ್ಮದೇ ಪಟಾಲಂ ಕಟ್ಟಿಕೊಂಡಿದ್ದ ಕೀರ್ತನ್, ನಿತಿನ್, ಮಹೇಶ್ ಹಾಗೂ ಇತರರ ಮೇಲೆ ಸ್ಥಳೀಯ ನಿವಾಸಿ ಉಮ್ಮು ಎಂಬಾತನಿಗೆ ಕಣ್ಣಿತ್ತು, ಈತ ಕಳವಾರಿನ ಯುವಕರ ಜೊತೆ ಸೇರಿಕೊಂಡು ಕತ್ತಿ ಮಸೆಯಲಾರಂಭಿಸಿದ್ದ. ಈ ಮಧ್ಯೆ ಕೆಲವು ದಿನಗಳ ಹಿಂದೆ ಕಟೀಲು ಸಮೀಪ ಬಾವಿಯ ಕೆಲಸ ಮಾಡುತ್ತಿದ್ದಾಗ ಇದೇ ತಂಡದ ಪ್ರಸಾದ್ ಎಂಬಾತ ಬಾವಿಗೆ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದ. ಇದನ್ನು ಆಗಾಗ ಉಮ್ಮು, ಸುಹಾಸ್ ಮತ್ತಿತರರು ಕೀರ್ತನ್ ಮತ್ತಿತರರಿಗೆ ಕಾಲ್ ಮಾಡಿ ತಮಾಷೆ ಮಾಡ್ತಾ ಇದ್ದ. ನಿಮ್ಮ ಗ್ಯಾಂಗ್ ನವ ಬಾವಿಗೆ ಬಿದ್ದ ಅಲ್ವಾ ಎಂದು ಕಿಚಾಯಿಸುತ್ತಿದ್ದ. ನಿನ್ನೆಯೂ ಅದೇ ರೀತಿ ಸಂಜೆ ಕೀರ್ತನ್ ಮೊಬೈಲ್ ಗೆ ಕರೆ ಮಾಡಿದ್ದ ಕಳವಾರಿನ ಯುವಕರು ತಮಾಷೆ ಮಾಡಿದ್ದರು. ಈ ವೇಳೆ ಎರಡೂ ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ನಂತರ ಕೀರ್ತನ್, ನಿತಿನ್, ಮನೀಶ್ ಧಮ್ಮಿದ್ರೆ ದೇವರಗುಡ್ಡೆಗೆ ಬನ್ನಿ ಎಂದು ಕರೆದಿದ್ರು. ರಾತ್ರಿ 7:45ರ ಸುಮಾರಿಗೆ 6 ಬೈಕ್ ಗಳಲ್ಲಿ ತ್ರಿಬಲ್ ರೈಡ್ ನಲ್ಲಿ ಬಂದಿದ್ದ 18ಕ್ಕೂ ಹೆಚ್ಚು ಮಂದಿ ಏಕಾಏಕಿ ತಲ್ವಾರ್ ದಾಳಿ ನಡೆಸಿದ್ದು ಕೀರ್ತನ್ ಸ್ಥಳದಲ್ಲೇ ಸನ್ನಪ್ಪಿದ್ದರೆ ನಿತಿನ್, ಮನೀಶ್ ಗಾಯಗೊಂಡಿದ್ದರು. ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿದ್ದರೂ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿಲ್ಲ, ಒಂದು ಗಂಟೆ ತಡವಾಗಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು ಅಷ್ಟರಲ್ಲಿ ಕೀರ್ತನ್ ಸಾವಿಗೀಡಾಡಿದ್ದ.

ಎಕ್ಕಾರಲ್ಲಿ ಗಾಂಜಾ ಅಡ್ಡೆ, ಪೊಲೀಸರು ಸೈಲೆಂಟ್!
ಜೋಕಟ್ಟೆ ಕೇಂದ್ರೀಕೃತವಾಗಿ ನಡೀತಾ ಇರೋ ಗಾಂಜಾ ದಂಧೆ ಎಕ್ಕಾರು ಪರಿಸರದಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಇದಕ್ಕೆ ಪರಿಸರದ ಹದಿಹರೆಯದ ಯುವಜನರು ಬಲಿಯಾಗುತ್ತಿದ್ದು ಕೊಲೆಗೀಡಾದ ಕೀರ್ತನ್ ಮತ್ತಿತರರು ಇದೇ ದಂಧೆಯಲ್ಲಿ ತೊಡಗಿಕೊಂಡಿದ್ದರು. ಸಂಜೆಯಾಗುತ್ತಿದ್ದಂತೆ ದೇವರಗುಡ್ಡೆಯಲ್ಲಿ ಗಾಂಜಾದ ಅಮಲು ಅವರಿಸಿಕೊಳ್ಳುತ್ತಿದ್ದು ಅಪ್ರಾಪ್ತ ವಿದ್ಯಾರ್ಥಿಗಳು ಕೂಡ ಗಾಂಜಾ ಅಮಲಿನಲ್ಲಿ ಸ್ಥಳೀಯವಾಗಿ ರೌಡಿಯಿಸಂ ಮಾಡುತ್ತಿರುವುದು ಆತಂಕಕಾರಿ ಸಂಗತಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಜೋಕಟ್ಟೆಯಿಂದ ಸಪ್ಲೈ ಆಗುವ ಗಾಂಜಾ ಎಕ್ಕಾರ್, ಕಟೀಲು, ಅರಸುಲೆ ಪದವು, ಬಜ್ಪೆ ಸುತ್ತಮುತ್ತ ಸರಬರಾಜು ಆಗುತ್ತಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಜರುಗಿಸದೇ ಇರುವುದು ಇಂತಹ ಘಟನೆಗಳು ಜರುಗಲು ಕಾರಣ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಇವರಿಗೆ ಸುರತ್ಕಲ್ ಮೂಲದ ಕೆಲವು “ಕಾಣದ ಕೈಗಳ” ಕೃಪಾಕಟಾಕ್ಷ ಇರುವುದು ಗುಟ್ಟಾಗಿ ಉಳಿದಿಲ್ಲ.

Leave a Reply

Your email address will not be published. Required fields are marked *