ಎಕ್ಕಾರ್: ಯುವಕನ ಕೊಲೆ ಪ್ರಕರಣ, ಆರೋಪಿಗಳಿಗೆ ನ್ಯಾ.ಸೆರೆ

ಮಂಗಳೂರು: ಬಜ್ಪೆ ಠಾಣಾ ವ್ಯಾಪ್ತಿಯ ಎಕ್ಕಾರು ದೇವರಗುಡ್ಡೆ ಬಳಿ ನಡೆದಿರುವ ಎಕ್ಕಾರ್ ನಿವಾಸಿ ಕೀರ್ತನ್(20) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸ್ ತಂಡ ವಶಕ್ಕೆ ಪಡೆದಿದ್ದು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಪ್ರಕರಣದಲ್ಲಿ 20ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು ಉಳಿದವರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
ಮೇ 31ರ ರಾತ್ರಿ 7:45ರ ಸುಮಾರಿಗೆ ಘಟನೆ ನಡೆದಿದ್ದು ತಲವಾರಿನಿಂದ ಕಡಿದು ಕೀರ್ತನ್ ಹತ್ಯೆಗೈಯಲಾಗಿತ್ತು. ಈತನ ಜೊತೆಗಿದ್ದ ನಿತಿನ್(20), ಮನೀಶ್(20) ಮೇಲೂ ತಲವಾರಿನಿಂದ ದಾಳಿ ನಡೆದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ತನಿಖೆ ನಡೆಸಿದ ಬಜ್ಪೆ ಠಾಣಾ ಪೊಲೀಸ್ ತಂಡ ಆರೋಪಿಗಳಾದ ಕಳವಾರು ನಿವಾಸಿ ಸುಹಾಸ್(20), ಪಚ್ಚು ಯಾನೆ ಪ್ರಶಾಂತ್(21), ಮೋಕ್ಷಿತ್(20) ದೀಪೇಶ್(21) ಹಾಗೂ ಗೌತಮ್ ಎಂಬವರನ್ನು ಬಂಧಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರರು ತಲೆಮರೆಸಿದ್ದಾರೆ. ಎಸಿಪಿ ಬೆಳ್ಳಿಯಪ್ಪ, ಬಜ್ಪೆ ಠಾಣಾ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *