ಉಳ್ಳಾಲ: ಸೋಂಕಿತ ಪೊಲೀಸರ ಗೋಳನ್ನೇ ಕೇಳುವವರಿಲ್ಲ!

ಮಂಗಳೂರು: ಇಂದು ಮತ್ತೆ ಉಳ್ಳಾಲ ಪೊಲೀಸ್ ಠಾಣೆಯ ಆರು ಮಂದಿ ಸಿಬ್ಬಂದಿಯಲ್ಲಿ ಮಾರಕ ಕೊರೊನಾ ಸೋಂಕು ದೃಢಪಟ್ಟಿದ್ದು ಸೋಂಕಿತ ಪೊಲೀಸರು ಮುಂಜಾನೆಯಿಂದಲೇ ಠಾಣೆಯ ಮುಂದೆ ಆಸ್ಪತ್ರೆಗೆ ದಾಖಲಾಗಲು ಕಾದು ಕುಳಿತಿದ್ದರೂ ಅವರ ಚಿಕಿತ್ಸೆಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೈರಲ್ ಆಗುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಕರಾಳತೆ, ಸರಕಾರಿ ಚಿಕಿತ್ಸೆ, ಜಿಲ್ಲಾಡಳಿತ ಹಾಗೂ ಸರಕಾರಗಳ ನಿರ್ಲಕ್ಷ್ಯವನ್ನು ಪ್ರಶ್ನೆ ಮಾಡುವಂತಾಗಿದೆ.
ಉಳ್ಳಾಲದಲ್ಲಿ ಕಳೆದ ವಾರ ಎಸ್ಸೈ, ಎಎಸ್ಸೈ ಸಹಿತ ನಾಲ್ಕು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇಂದು ಮತ್ತೆ 6 ಮಂದಿ ಪೊಲೀಸರಿಗೆ ಸೋಂಕು ತಗಲಿದೆ. ಬೆಳಗ್ಗೆ 10 ಗಂಟೆಯಿಂದ ಉಳ್ಳಾಲ ಠಾಣೆ ಮುಂಭಾಗದಲ್ಲಿ ಸೋಂಕಿತರು ಕಾಯುತ್ತಿದ್ದು ಅವರನ್ನು ಯಾವ ಆಸ್ಪತ್ರೆಗೂ ದಾಖಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರತಿಷ್ಠಿತ ಆಸ್ಪತ್ರೆಗಳೇ ಸೋಂಕಿತರನ್ನು ದಾಖಲಿಸಲು ಹಿಂದೇಟು ಹಾಕಿದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಜಿಲ್ಲೆಯ ಜನರು ಕೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸೋಂಕಿನಿಂದ ನಾಲ್ವರು ಪ್ರಾಣ ಕಳೆದುಕೊಂಡಿದ್ದು ಜಿಲ್ಲಾಡಳಿತ ಏನು ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸುವವರಾರು?