ಉಳ್ಳಾಲದ ಮಹಿಳೆ ಕೊರೊನಾಕ್ಕೆ ಬಲಿ?

ಮಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಉಳ್ಳಾಲದ ಮಹಿಳೆಗೆ ಕೊರೊನಾ ಪಾಸಿಟಿವ್ ಆಗಿದ್ದು ಆಸ್ಪತ್ರೆಯ ಇತರ ಸಿಬ್ಬಂದಿ ಹಾಗೂ ರೋಗಿಗಳಲ್ಲಿ ಸೋಂಕಿನ ಭೀತಿ ಎದುರಾಗಿದೆ. ಉಳ್ಳಾಲ ಅಝಾದ್ ನಗರದ 57 ವರ್ಷದ ಮಹಿಳೆಯನ್ನು ಬೇಧಿಯ ಕಾರಣದಿಂದ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು 8 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದ್ದು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಇಂದು ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಕೊರೊನಾ ಸೋಂಕಿನಿಂದಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಿಳೆ 8 ದಿನಗಳ ಕಾಲ ಚಿಕಿತ್ಸೆ ಪಡೆದ ಆಸ್ಪತ್ರೆಯ ಸಿಬ್ಬಂದಿಗಳಿಗೂ ಕೊರೊನಾ ಭೀತಿ ಉಂಟಾಗಿದ್ದು ಮಹಿಳೆಗೆ ಚಿಕಿತ್ಸೆ ನೀಡಿದ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಹಲವು ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. ಮಹಿಳೆಗೆ ಕೊರೊನಾ ಹೇಗೆ ಬಂದಿದೆ ಎಂದು ಇನ್ನೂ ತಿಳಿದು ಬಂದಿಲ್ಲ. ಸೋಂಕು ದೃಢಪಟ್ಟ ಕಾರಣದಿಂದ ಮಹಿಳೆ ವಾಸವಿದ್ದ ಮನೆ ಹಾಗೂ ಆ ಕೌಪೌಂಡ್‍ನಲ್ಲೇ ಇದ್ದ ಇನ್ನೊಂದು ಮನೆಯನ್ನು ಸೀಲ್‍ಡೌನ್ ಮಾಡಲಾಗಿದ್ದು ಮಹಿಳೆಯ ಮನೆಯ 15 ಮಂದಿ ಹಾಗೂ ನೆರೆಮನೆಯ 4 ಮಂದಿ ಸೇರಿ ಒಟ್ಟು 19 ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಈ ಕುರಿತು ಜಿಲ್ಲಾಡಳಿತದ ಅಧಿಕೃತ ಪ್ರಕಟನೆ ಬರೋದು ಬಾಕಿಯಿದೆ.

Leave a Reply

Your email address will not be published. Required fields are marked *