ಇದು ಧರ್ಮಗಳ ಎಲ್ಲೆ ಮೀರಿದ ಬಾಂಧವ್ಯ! 25 ವರ್ಷಗಳ ಹಿಂದಿನ ಸಹಾಯಕ್ಕೆ ಮುಸ್ಲಿಂ ಉದ್ಯಮಿಯನ್ನು ಸನ್ಮಾನಿಸಿದ ಬಂಟ ಕುಟುಂಬ!!

ಮಂಗಳೂರು: ಆ ಧರ್ಮ ಈ ಧರ್ಮ ಎಂದು ಕಚ್ಚಾಡುವವರು, ಮಾತೆತ್ತಿದರೆ ಬರೀ ಧರ್ಮದ ಅಂಧತ್ವವನ್ನೇ ತೋರಿಸುವವರು ಈ ಸ್ಟೋರಿಯನ್ನೊಮ್ಮೆ ಓದಲೇಬೇಕು. ಇದು ಮುಸ್ಲಿಂ ಉದ್ಯಮಿಯೊಬ್ಬರು 25 ವರ್ಷಗಳ ಹಿಂದೆ ಮಾಡಿದ್ದ ಉಪಕಾರಕ್ಕೆ ಬಂಟ ಸಮುದಾಯದ ಕುಟುಂಬವೊಂದು ಆಮಂತ್ರಿಸಿ ಸನ್ಮಾನಿಸಿ ಕೃತಾರ್ಥರಾದ ಕಥೆ.
25 ವರ್ಷಗಳ ಹಿಂದಿನ ಘಟನೆ.
ಅಂದು ಪಣಂಬೂರು ಬಳಿಯ NMPT ಎದುರು ಟ್ರಕ್ ಗೆ ಒಂದು ಕಾರು ಬಲವಾಗಿ ಹೊಡೆದು ಭೀಕರ ಅಪಘಾತವಾಗಿತ್ತು. ಕಾರಿನಲ್ಲಿದ್ದ ಕಿನ್ನಿಗೋಳಿ ಮೂಲದ ಬಂಟ ಸಮುದಾಯಕ್ಕೆ ಸೇರಿದ ಪತಿ-ಪತ್ನಿ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆ ಕ್ಷಣದಲ್ಲಿ ಸ್ಥಳಕ್ಕೆ ಧಾವಿಸಿದ್ದ ಶಾನ್ ಕನ್ ಸ್ಟ್ರಕ್ಷನ್ ಮತ್ತು ಲಾಜಿಸ್ಟಿಕ್ ಮಾಲಕರಾದ ಕೆ.ಬಿ. ಶರೀಫ್ ಅವರು ಕೂಡಲೇ ಅಪರಿಚಿತ ದಂಪತಿಯನ್ನು ಎತ್ತಿ ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿದರು. ಸೀತಾರಾಮ್ ಶೆಟ್ಟಿ-ಮೋಹಿನಿ ಶೆಟ್ಟಿ ದಂಪತಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗುವವರೆಗೆ ಅವರ ಆರೈಕೆಯನ್ನು ಮಾಡಿದರು.
ತನ್ನ ಸೇವೆ ಆದ ನಂತರ ಶರೀಫ್ ರವರು ಘಟನೆಯನ್ನು ಮರೆತಿದ್ದರು.
ಆದರೆ ದಂಪತಿ ಹಾಗೂ ಅವರ ಇಡೀ ಕುಟುಂಬ ಈ ಉಪಕಾರವನ್ನು ಮರೆಯಲಿಲ್ಲ.
ಕಳೆದ 25 ವರ್ಷಗಳಿಂದ ಶರೀಫ್ ರವರಿಗೆ ಕರೆಯನ್ನು ಮಾಡುತ್ತಾ ತಮ್ಮ ಕಡೆ ಬರಲು ಆಮಂತ್ರಿಸುತ್ತಿದ್ದರು. ಒಂದು ದಿನ ಆವರ ಒತ್ತಾಯಕ್ಕೆ ಓಗೊಟ್ಟು ತಮ್ಮ ಪತ್ನಿ ಮಕ್ಕಳೊಂದಿಗೆ ಭೇಟಿ ನೀಡಿದಾಗ ಅವರಿಗೆ ನಂಬಲಸಾಧ್ಯ ಎಂಬಂತೆ ಆ ಸಂಸಾರ ಪಕ್ಷಿಕೆರೆ ಬಳಿಯ ಸುರಗಿರಿ ದೇವಸ್ಥಾನದ ಸಭಾಮಂದಿರದಲ್ಲಿ ಏರ್ಪಡಿಸಿದ್ದ ತಮ್ಮ 50ನೇ ವರ್ಷದ ವಿವಾಹ ವಾರ್ಷಿಕ ದಿನಕ್ಕೆ ಶರೀಫ್ ಮತ್ತವರ ಪತ್ನಿ ಆಫ್ಸತ್ ಷರೀಫ್ ಅವರನ್ನು ವಿಜೃಂಭಣೆ ಯಿಂದ ಬರಮಾಡಿ ತಮ್ಮ ಕುಟುಂಬ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಅತ್ಯಂತ ಗೌರವಪೂರ್ವಕ ಸನ್ಮಾನ ನಡೆಸಿ ನೆನಪಿನ ಕಾಣಿಕೆಗಳನ್ನು ನೀಡಿದರು.
ಉಪಕಾರ ಮಾಡಿದವರನ್ನು ಮರುಕ್ಷಣವೇ ಮರೆತು ಬಿಡುವ ಈ ಕಾಲದಲ್ಲಿ ತಮ್ಮ ಜೀವ ಉಳಿಸಿದ ಈ ಆಪತ್ಭಾಂದವ ಬೇರೆ ಧರ್ಮದವನಾದರೂ 25 ವರ್ಷ ಸಂದರೂ ಕೃತಜ್ಞತೆ ಅರ್ಪಿಸಲು ಮರೆಯದ ಈ ಬಂಟ್ಸ್ ಸಂಸಾರಕ್ಕೆ, ಅವರ ಸೌಹಾರ್ದತೆಗೆ ಎಲ್ಲರೂ ತಲೆಬಾಗಲೇಬೇಕು.
ಸದಾ ಆ ಜಾತಿ ಈ ಜಾತಿ ಎಂದು ಬಡಿದಾಡುವ ಧರ್ಮದ ವಿಚಾರದಲ್ಲಿ ನೆರೆಹೊರೆಯಲ್ಲಿ ಮಕ್ಕಳಿರುವಾಗ ಎತ್ತಿ ಆಡಿಸಿದವರ ಮೇಲೆಯೇ ಕೆಂಗಣ್ಣು ಬೀರುವ ಇಂದಿನ ಯುವಕರಿಗೆ ಇಂತಹ ಘಟನೆ ಆದರ್ಶವಾಗಬೇಕಿದೆ.

Leave a Reply

Your email address will not be published. Required fields are marked *