`ಆಶಾ ಕಾರ್ಯಕರ್ತೆಯರ ವೇತನ ನೀಡುವಲ್ಲಿ ಸರ್ಕಾರದ ವಿಳಂಬ ನೀತಿ ನಾಚಿಕೆಗೇಡು’

ಗುಬ್ಬಿ: ಕೊರೋನಾ ವಾರಿಯರ್ಸ್‍ಗಳಾಗಿ ಸಮಾಜದ ಆರೋಗ್ಯಕ್ಕೆ ತಮ್ಮ ಪ್ರಾಣವನ್ನೇ ಪಣವಿಟ್ಟ ಆಶಾ ಕಾರ್ಯಕರ್ತೆಯರ ವೇತನ ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಅನುಸರಿಸಿರುವುದು ನಾಚಿಕೆಗೇಡಿನ ವಿಚಾರ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದರು. ತಾಲ್ಲೂಕಿನ ದೊಡ್ಡಕುನ್ನಾಲ ಗ್ರಾಮದಲ್ಲಿ ಎಸ್‍ಸಿಪಿ ಟಿಎಸ್‍ಪಿ ಯೋಜನೆಯ 15 ಲಕ್ಷ ರೂಗಳ ಸಿಸಿ ರಸ್ತೆ ಹಾಗೂ 11 ಲಕ್ಷ ರೂ.ಗಳ ದಾದುಬೈಪಾಳ್ಯದ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಗುತ್ತಿಗೆ ಆಧಾರದ ಸಿಬ್ಬಂದಿಯ ಬದುಕು ಮೂರಾಬಟ್ಟೆಯಾಗಿದೆ. ಅವರಿಗೆ ನೀಡುವ ಕನಿಷ್ಠ ವೇತನವನ್ನೇ ನೀಡದಿದ್ದರೆ ಸರ್ಕಾರದ ಕಾರ್ಯ ವೈಖರಿ ವೈಪಲ್ಯ ಎತ್ತಿಹಿಡಿಯುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಕಳೆದ ಮೂರು ತಿಂಗಳಿಂದ ವೇತನವಿಲ್ಲದೇ ಪರದಾಡಿದ ಗುತ್ತಿಗೆ ಸಿಬ್ಬಂದಿಗಳಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ನೌಕರರ ಬದುಕು ನಿರ್ವಹಣೆ ಕಷ್ಟವಾಗಿದೆ. ಈ ಜತೆಗೆ ಅತಿಥಿ ಶಿಕ್ಷಕರ ಗೋಳು ಕೇಳುವವರಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಶಿಕ್ಷಣ ವ್ಯವಸ್ಥೆಗೆ ಒಲವು ತೋರಿದ್ದರು. ಆದರೆ ಬಿಜೆಪಿ ಸರ್ಕಾರ ನೇಮಿಸಿಕೊಂಡ ಶಿಕ್ಷಕರಿಗೆ ಹಣ ನೀಡುತ್ತಿಲ್ಲ. ಈ ಪೈಕಿ ಜೀವನ ಕಷ್ಟ ಎನಿಸಿ ಶಿಕ್ಷಕರು ಆತ್ಮಹತ್ಯೆಯತ್ತ ಸಾಗಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು. ಹೇಮಾವತಿ ನೀರು ಹರಿಸುವ ಯೋಜನೆಗಳಲ್ಲಿ ನೆನೆಗುದಿಯತ್ತ ಸಾಗಿದ್ದ ಹಲವು ಯೋಜನೆಗೆ ಮರು ಚಾಲನೆ ನೀಡಲು ಮೂರು ಸಭೆಗಳನ್ನು ನಡೆಸಲಾಗಿದೆ. ಈ ಬಾರಿ ಹಾಗಲವಾಡಿ, ಬಿಕ್ಕೇಗುಡ್ಡ ಯೋಜನೆಗೆ ಅಸ್ತು ದೊರೆಕಿದೆ. ಮಠದಹಳ್ಳ, ವರದೇನಹಳ್ಳಿ ಹಟ್ಟಿ ಕೆರೆಗಳಿಗೆ ಹೇಮೆ ಹರಿಸಲು ಕೆಲ ತಾಂತ್ರಿಕ ಸಮಸ್ಯೆ ಅಡ್ಡಿಯಾಗಿತ್ತು. ಹಾಗಲವಾಡಿ ಕೆರೆಗೆ ರೈತರಿಂದ ಅಡ್ಡಿಯಾಗಿತ್ತು. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದು, ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ. ಈ ಜತೆಗೆ ಭೋಗಸಂದ್ರ, ಅಪ್ಪೇನಹಳ್ಳಿ ಕೆರೆಗೆ 2 ಎಂಸಿಎಫ್‍ಟಿ ನೀರು, ಹಾಗ¯ವಾಡಿಗೆ ಬಾಕಿ ಇರುವ 600 ಮೀಟರ್ ಕೆಲಸಕ್ಕೆ ಚಾಲನೆ ದೊರೆಯಲಿದೆ ಎಂದರು.
ಸಾರ್ವಜನಿಕರಿಗೆ ಅಗತ್ಯವಸ್ತುಗಳಾದ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಪ್ರತಿನಿತ್ಯ ಆಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡುತ್ತಿಲ್ಲ. ಈ ಹಿಂದೆ ಯುಪಿಎ ಸರ್ಕಾರದಲ್ಲಿ ದರ ಏರಿಕೆಗೆ ಅರಚಿಕೊಳ್ಳುತ್ತಿದ್ದ ಬಿಜೆಪಿ ಇಂದು ನಿತ್ಯ ಬೆಲೆ ಏರಿಕೆ ಮಾಡಿ 12 ರೂಗಳವರೆಗೆ ಹೆಚ್ಚಳ ಮಾಡಿದ್ದಾರೆ. ಜನರ ಕಷ್ಟ ಅರಿಯದ ಬಿಜೆಪಿ ಕೇಂದ್ರ ಸರ್ಕಾರಕ್ಕೆ ಮತ ನೀಡಿ ಆಯ್ಕೆ ಮಾಡಿದ ತಪ್ಪಿಗೆ ಜನತೆ ಪಶ್ಚಾತಾಪ ಪಡುತ್ತಿದೆ. ಎಲ್ಲವೂ ವ್ಯಾಪಾರೀಕರಣ ಮಾಡುವವರಿಗೆ ಬಡವನ ಕೂಗು ಕೇಳದು ಎಂದ ಅವರು ನೆಫೆಡ್ ಕೊಬ್ಬರಿ ಖರೀದಿ ಕೇಂದ್ರ ತುರ್ತು ತೆರವಿಗೆ ಆಗ್ರಹ ಮಾಡುತ್ತಿದ್ದೇನೆ. ರಾಜ್ಯ ಸರ್ಕಾರ ಈ ಹಿಂದೆ ಹೇಳಿದಂತೆ 12500 ರೂಗಳಂತೆ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ರೆಹಮತ್‍ವುಲ್ಲಾ, ಮುಖಂಡರಾದ ಕೊಪ್ಪ ವೆಂಕಟೇಶ್, ಸುರೇಶ್, ರಿಯಾಜ್ ಅಹಮದ್, ಉಮೇರಾಬಾನು, ಇಕ್ಬಾಲ್ ಅಹಮದ್, ನಜೀರ್ ಅಹಮದ್, ಗುತ್ತಿಗೆದಾರ ನರಸಿಂಹಮೂರ್ತಿ, ಖಾಜಾಸಾಬ್, ಎಇಇ ಶ್ರೀಪಾದ, ಎಇ ಚಿದಾನಂದ್, ಪಿಡಿಒ ತನುಜಾ, ಕಾರ್ಯದರ್ಶಿ ನಾಗರಾಜು ಇತರರು ಇದ್ದರು.

Leave a Reply

Your email address will not be published. Required fields are marked *