ಅರ್ಧ ದಿನದ ವ್ಯಾಪಾರದಿಂದ ಸಮಸ್ಯೆ: ಸರಿಪಡಿಸಲು ತಹಸೀಲ್ದಾರ್ಗೆ ಮನವಿ
ಗುಬ್ಬಿ: ತಾಲೂಕಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ವರ್ತಕರ ಸಂಘ ಸೇರಿದಂತೆ ಕೆಲ ಸಂಘಟನೆಗಳು ಅಂಗಡಿ ಮುಂಗಟ್ಟು ಅರ್ಧ ದಿನಗಳ ಕಾಲ ಬಂದ್ ಮಾಡಿ ವ್ಯವಹಾರ ನಡೆಸುವುದು ಅವೈಜ್ಞಾನಿಕವಾಗಿದೆ. ಮಧ್ಯಾಹ್ನದ ನಂತರ ಹಾಗೂ ಸಂಜೆ ವೇಳೆ ವ್ಯಾಪಾರ ಮಾಡಿಕೊಳ್ಳುವ ಸಣ್ಣಪುಟ್ಟ ವ್ಯವಹಾರಸ್ಥರಿಗೆ ತೀವ್ರ ಸಮಸ್ಯೆ ಆಗಲಿದೆ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶವಿದ್ದಲ್ಲಿ ಮಾತ್ರ ಪಾಲಿಸುತ್ತೇವೆ ಎಂದು ಸಣ್ಣ ವ್ಯಾಪಾರಿಗಳು ತಹಸೀಲ್ದಾರ್ ಡಾ. ಪ್ರದೀಪ್ ಕುಮಾರ್ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಸೋಮವಾರ ಕೆಲ ವರ್ತಕರು ತಾಲ್ಲೂಕು ಕಚೇರಿಯಲ್ಲಿ ಸಭೆ ನಡೆಸಿ ಏಕಾಏಕಿ ನಿರ್ಧಾರ ಕೈಗೊಂಡು ಬೆಳಿಗ್ಗೆ 7 ರಿಂದ ಮದ್ಯಾಹ್ನ 2 ರವರೆಗೆ ಮಾತ್ರ ವ್ಯವಹಾರ ನಡೆಸಿಕೊಳ್ಳುವುದಾಗಿ ತಿಳಿಸಿ ಮನವಿ ಮಾಡಿದ್ದಾರೆ. ಆದರೆ ದೊಡ್ಡ ಮಟ್ಟದ ವ್ಯಾಪಾರಸ್ಥರು ಹಾಗೂ ಬಂಡವಾಳಶಾಹಿಗಳು ತಮ್ಮ ವ್ಯಾಪಾರಕ್ಕೆ ಅನುಕೂಲವಾಗುವಂತೆ ಸಮಯ ನಿಗದಿ ಮಾಡಿಕೊಂಡು ಬಂದ್ ಆಚರಿಸಲು ಮುಂದಾಗಿರುವುದು ಸಮಂಜಸವಲ್ಲ. ನಿತ್ಯ ಹೊಟೇಲ್ಗಳು ಮಧ್ಯಾಹ್ನ ವೇಳೆಯಲ್ಲೇ ವ್ಯಾಪಾರ ನಡೆಯುತ್ತದೆ. ಪಾನಿಪೂರಿ, ಗೋಬಿ ಅಂಗಡಿಗಳು, ತರಕಾರಿ ಹಣ್ಣು ವ್ಯಾಪಾರಿಗಳು ಸೇರಿದಂತೆ ಬೇಕರಿ ಅಂಗಡಿಗಳಿಗೂ ಸಂಜೆ ವೇಳೆ ಮಾತ್ರ ವ್ಯಾಪಾರ ನಡೆಯುತ್ತದೆ. ಇಂತಹವರಿಗೆ ಅನ್ಯಾಯವಾಗುತ್ತದೆ. ಈ ಬಗ್ಗೆ ಪರಾಮರ್ಶಸಿದ ನಿರ್ಧಾರಕ್ಕೆ ನಮ್ಮ ಬೆಂಬಲವಿಲ್ಲ ಎಂದು ಹೋಟೆಲ್ ಮಾಲಿಕ ಮಂಜುನಾಥ್ ತಿಳಿಸಿದರು.
ಯಾವುದೇ ಸಭೆಯನ್ನು ನಡೆಸದೇ ಏಕಾಏಕಿ ನಿರ್ಧಾರ ಕೈಗೊಂಡ ಕೆಲ ವರ್ತಕರು ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳ ವಿಚಾರ ಮಾಡಬೇಕಿತ್ತು. ನಿತ್ಯ ಬಂಡವಾಳ ಹೂಡಿ ಅಂದಿನ ಸಂಪಾದನೆಯಲ್ಲೇ ಜೀವನ ಸಾಗಿಸುವ ಫುಟ್ಪಾತ್ ವ್ಯಾಪಾರಿಗಳ ಬಗ್ಗೆ ಕೇಳುವವರಿಲ್ಲ. ಸರ್ಕಾರದ ಆದೇಶದಂತೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾದು ನಮ್ಮ ವ್ಯವಹಾರ ನಡೆಸಿದ್ದೇವೆ. ಮೊದಲಿನಂತೆ ವ್ಯಾಪಾರಗಳು ನಡೆಯದೇ ಹೊಟ್ಟೆಪಾಡಿನ ಸಂಪಾದನೆಯಲ್ಲಿರುವ ಸಮಯದಲ್ಲಿ ಮತ್ತೆ ಒಂದು ವಾರ ಬಂದ್ ಮಾಡಿದರೇ ನಮ್ಮ ಬದುಕು ಮೂರಾಬಟ್ಟೆಯಾಗುತ್ತದೆ. ತಾಲೂಕು ಆಡಳಿತ ಆದೇಶ ನೀಡಿದಲ್ಲಿ ಮಾತ್ರ ಬಂದ್ ಮಾಡುತ್ತೇವೆ ಎಂದು ಸಿ.ಆರ್.ಶಂಕರ್ ಕುಮಾರ್ ಮತ್ತು ಎಚ್.ಟಿ. ಭೈರಪ್ಪ ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಡಾ. ಪ್ರದೀಪ್ ಕುಮಾರ್ ಹಿರೇಮಠ, ಕೋವಿಡ್-19 ವೈರಸ್ ನಮ್ಮ ತಾಲೂಕಿನಲ್ಲಿ ಮೂರು ಪ್ರಕರಣಗಳಾಗಿವೆ. ಈ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯಲು ಅಗತ್ಯ ಜಾಗೃತಿ ಮೂಡಿಸಲು ಸಾರ್ವಜನಿಕರಿಂದ ಜವಾಬ್ದಾರಿ ನಡೆ ನಿರೀಕ್ಷೆಯಲ್ಲಿದ್ದೆವು. ವರ್ತಕರ ಸಂಘ ಅರ್ಧ ದಿನ ವ್ಯಾಪಾರ ನಿಲ್ಲಿಸುವ ಮಾತುಗಳಾಡಿತ್ತು . ಆದರೆ ಸಣ್ಣಪುಟ್ಟ ವ್ಯಾಪಾರಿಗಳಿಗೆ ಸಮಸ್ಯೆ ಆಗುವ ಕಾರಣವಿದ್ದಲ್ಲಿ ಸ್ವಯಂಪ್ರೇರಣೆಗೆ ಮಾತ್ರ ಅವಕಾಶವಿದೆ. ಸರ್ಕಾರದ ಯಾವುದೇ ಆದೇಶವಿಲ್ಲದ ಕಾರಣ ಬಂದ್ ಮಾಡಲು ತಾಲೂಕು ಆಡಳಿತ ತಿಳಿಸಿಲ್ಲ. ವ್ಯಾಪಾರಸ್ಥರು ಕೊರೊನಾ ಬಗ್ಗೆ ತಿಳಿದು ತಮ್ಮ ಅಂಗಡಿಗಳ ಬಳಿ ಜನ ಸೇರಿಸುವ ಕೆಲಸಬೇಡ ಎನ್ನುವುದು ನಮ್ಮ ಮನವಿ ಎಂದರು.
ಈ ಸಂದರ್ಭದಲ್ಲಿ ಪ.ಪಂ. ಸದಸ್ಯರಾದ ಸಿ.ಮೋಹನ್, ಕುಮಾರ್, ಮುಖಂಡರಾದ ಕೆ.ಆರ್. ಅಶೋಕ್ ಕುಮಾರ್, ಡಿ.ರಘು, ಕಾಂತರಾಜು, ಗಂಗಾಧರ್, ಎಚ್.ಡಿ. ಯಲ್ಲಪ್ಪ, ಸಲೀಂಪಾಷ, ರಾಜೇಶ್ ಗುಬ್ಬಿ ಇತರರು ಇದ್ದರು.