ಅದಾಯಕ್ಕಿಂತ ಹೆಚ್ಚಿನ ಆಸ್ತಿ: ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಮಂಗಳೂರು: ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾಗಿದ್ದ ಜೋಸೆಫ್ ಡೇನಿಸ್ ಮಿರಾಂಡ ಅವರು ತಮ್ಮ ಸೇವಾವಧಿಯಲ್ಲಿ ಆದಾಯಕ್ಕಿಂತಲೂ ಮೀರಿ ಹೆಚ್ಚಿನ ಆಸ್ತಿ ಹೊಂದಿದ್ದಾರೆಂದು ದಿನಾಂಕ 12-12-2017ರಂದು ಆಗಿನ ಭ್ರಷ್ಟಾಚಾರ ನಿಗ್ರಹದಳದ ಡಿ.ವೈ.ಎಸ್.ಪಿ. ಸುಧೀರ್ ಹೆಗ್ಡೆ ಮತ್ತು ಇನ್‍ಸ್ಪೆಕ್ಟರ್ ಯೋಗೀಶ್ ಕುಮಾರ್ ತಂಡ ದಾಳಿ ನಡೆಸಿ ಹಲವು ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದರು. ದಾಳಿ ಸಂದರ್ಭ ಒಂದು ಕೋಟಿ ಏಳು ಲಕ್ಷದಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿತ್ತು.
ಆರೋಪಿ ಬಂಧನದ ಬೀತಿಯಿಂದ ಆರೋಪಿ ಮಾನ್ಯ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಭ್ರಷ್ಟಾಚಾರ ವಿರೋಧಿ ಖಾಯಿದೆಯ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಸದ್ರಿ ಅರ್ಜಿಯನ್ನು ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿ ರವರು ವಜಾಗೊಳಿಸಿ ದಿನಾಂಕ 09-06-2020 ರಂದು ಆದೇಶಿಸಿದರು. ಭ್ರಷ್ಟಾಚಾರ ನಿಗ್ರಹದಳದ ಪರ ವಕೀಲರಾದ ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್.ಎನ್. ರಾಜೇಶ್ ಆರೋಪಿಯ ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರಾದ ಬಿ. ಬಿ. ಜಕಾತಿ ರವರು ಆರೋಪಿ ಜೋಸೆಫ್ ಡೇನಿಸ್ ಮಿರಾಂಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.
ಈ ಮೊದಲು ಮಾನ್ಯ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಭ್ರಷ್ಟಾಚಾರ ಕಾಯಿದೆಯ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾದೀಶರಾಗಿದ್ದ ಶ್ರೀ ಬಿ. ಮುರಳೀಧರ ಪೈ ಯವರು ವರ್ಗಾವಣೆಗೊಂಡ ಬಳಿಕ ಬಿ.ಬಿ. ಜಕಾತಿಯವರು ಬೆಂಗಳೂರಿನಿಂದ ವರ್ಗಾವಣೆಗೊಂಡು ಬಂದಿದ್ದು ದಿನಾಂಕ 01-06-2020 ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ. ದೊಡ್ಡ ಮೊತ್ತದ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ ಬಗ್ಗೆ ಆರೋಪವಿದ್ದು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಅಗತ್ಯವಿದ್ದಲ್ಲಿ ಬಂದಿಸಬೇಕಾಗುವ ಸನ್ನಿವೇಶವನ್ನು ತಳ್ಳಿ ಹಾಕುವಂತಿಲ್ಲ ಎಂದು ಅಭಿಪ್ರಾಯ ಪಟ್ಟ ನ್ಯಾಯಧೀಶ ಬಿ.ಬಿ. ಜಕಾತಿ ಯವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಪರ ವಿಶೇಷ ಸರಕಾರಿ ಅಭಿಯೋಜಕ ಮತ್ತು ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.

Leave a Reply

Your email address will not be published. Required fields are marked *