“ಅಣ್ಣಾಮಲೈ ಆರೆಸ್ಸೆಸ್ ಕಾರ್ಯಕರ್ತ, ಮಾಧ್ಯಮಗಳೇ ಅವರನ್ನು ಸಿಂಗಂ ಮಾಡಿದ್ದು…”

ಮಂಗಳೂರು: ಖಡಕ್ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಬಿಜೆಪಿ ಪಕ್ಷ ಸೇರಿರುವ ಬಗ್ಗೆ ಪರ ವಿರೋಧ ಟೀಕೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅವರು, “ಅಣ್ಣಾಮಲೈ ಓರ್ವ ಖಾಕಿ ಬಟ್ಟೆ ತೊಟ್ಟಿದ್ದ ಆರೆಸ್ಸೆಸ್ ಕಾರ್ಯಕರ್ತ, ಹೀಗಾಗಿ ಅವರು ಬಿಜೆಪಿ ಸೇರಿದ್ದು ಅಚ್ಚರಿಯ ಸಂಗತಿಯೇನೂ ಅಲ್ಲ” ಅಂದಿದ್ದಾರೆ.
ಅಣ್ಣಾಮಲೈ ಅವರೊಳಗೊಬ್ಬ ಆರೆಸ್ಸೆಸ್ ಕಾರ್ಯಕರ್ತ ಇರೋದು ನಮಗೆಲ್ಲ ಮೊದಲೇ ತಿಳಿದಿತ್ತು. ಯಾಕೆಂದರೆ ಕಳೆದ ಬಾರಿ ಬಾಬಾ ಬುಡನ್ ಗಿರಿಯಲ್ಲಿ ಭಜರಂಗದಳ, ಆರೆಸ್ಸೆಸ್ ಮತ್ತಿತರ ಹಿಂದೂ ಸಂಘಟನೆಗಳು ದಾಂಧಲೆ ನಡೆಸಿದ್ದಾಗ ಅಣ್ಣಾಮಲೈ ಅವರ ಪರವಾಗಿ ಸಹಕಾರ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ನನಗೆ ಸಮಾಜಕ್ಕಿಂತ ನನ್ನ ಪೊಲೀಸರೇ ಮುಖ್ಯ ಅಂದಿದ್ದರು. ಇದು ಹಿಂದೂ ಸಂಘಟನೆಗಳು ಏನೂ ಬೇಕಾದರೂ ಮಾಡಿ ಎಂಬ ಪರೋಕ್ಷವಾಗಿ ಸಹಕಾರ ನೀಡಿದಂತಿತ್ತು.
ಅಣ್ಣಾಮಲೈ ಅವರೊಬ್ಬ ಸಿಂಗಂ ಖಂಡಿತಾ ಅಲ್ಲ, ಇದೆಲ್ಲವೂ ಮಾಧ್ಯಮಗಳ ಸೃಷ್ಟಿ. ಇನ್ನು ಅವರ ರಾಜೀನಾಮೆ ವಿಚಾರದಲ್ಲೂ ಅಷ್ಟೇ, ಜನತೆಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಗಿದ್ದ ಸೆಂಥಿಲ್, ಕೇರಳದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಗೋಪಿನಾಥ್ ರಂಥವರು ತಮ್ಮ ರಾಜೀನಾಮೆಗೆ ಕೇಂದ್ರ ಸರಕಾರವೇ ಕಾರಣ ಎಂದು ಅಧಿಕಾರದಿಂದ ಕೆಳಕ್ಕೆ ಇಳಿದಿದ್ದರು. ಆದರೆ ಇವರು ಅಲ್ಲೂ ಏನೂ ಹೇಳದೆ ಮುಚ್ಚುಮರೆ ಮಾಡಿದರು. ಆಗಲೇ ಅವರು ಬಿಜೆಪಿ ಸೇರುವ ಮುನ್ಸೂಚನೆ ಸಿಕ್ಕಿತ್ತು. ಅವರು ಯಾವ ಪಕ್ಷ ಸೇರಿದರೂ ಜನರಿಗೆ ಏನೂ ಲಾಭವಿಲ್ಲ ಎಂದು ಅಥಾವುಲ್ಲಾ ಹೇಳಿದ್ದಾರೆ.

Leave a Reply

Your email address will not be published. Required fields are marked *