ಅಕ್ರಮ ಸಂಬಂಧ ಹೊಂದಿದ್ದ ಯುವಕನಿಗೆ ಮೂತ್ರ ಕುಡಿಸಿ ಹಲ್ಲೆ

ಜೈಪುರ: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಯುವಕನಿಗೆ ಸ್ಥಳೀಯರು ಮೂತ್ರ ಕುಡಿಸಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಯುವಕನನ್ನು ಸಿರೋಹಿ ಜಿಲ್ಲೆಯ ಭೇವ್ ಪಲಾಡಿ ಗ್ರಾಮದ ನಿವಾಸಿ ಕಲುರಾಮ್ (24) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿದೆ. ಯುವಕನಿಗೆ ಜನಸಮೂಹದ ಮುಂದೆ ಮೂತ್ರ ಮತ್ತು ಶೂನಿಂದ ನೀರನ್ನು ಕುಡಿಯುವಂತೆ ಒತ್ತಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮೇರ್ ಪುರ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ತನ್ನ ಗ್ರಾಮದ 8 ಮಂದಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾನೆ. ಎಫ್‍ಐಆರ್ ಪ್ರಕಾರ, ಜೂನ್ 11ರಂದು ನಾನು ನನ್ನ ಚಿಕ್ಕಪ್ಪನನ್ನು ಭೇವ್‍ನಿಂದ ಭರೋಂಡಾ ಗ್ರಾಮಕ್ಕೆ ಬಿಡಲು ಹೋಗಿದ್ದೆ. ಈ ವೇಳೆ ಪುರುಷರ ಗುಂಪೊಂದು ನನ್ನನ್ನು ಅಪಹರಿಸಿ ಬಲವಂತವಾಗಿ ಮದ್ಯದ ಬಾಟಲಿನಲ್ಲಿದ್ದ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಆರೋಪಿಗಳು ನನಗೆ ಥಳಿಸಿದ್ದು, ಅದನ್ನು ವಿಡಿಯೋ ಕೂಡ ಮಾಡಿದ್ದಾರೆ ಎಂದು ಕಲುರಾಮ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಎಸ್‍ಪಿ ರಾಹುಲ್ ಕೊಟೆಕಿ ಮಾತನಾಡಿ, ಯುವಕ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಈ ವಿಚಾರ ತಿಳಿದ ಗ್ರಾಮದ ಕೆಲ ಜನರು ಕೋಪಗೊಂಡು ಆತನನ್ನು ಅಪಹರಿಸಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ. ನಾವು ಈ ಕುರಿತು ಎಫ್‍ಐಆರ್ ದಾಖಲಿಸಿದ್ದೇವೆ. 8 ಪ್ರಮುಖ ಆರೋಪಿಗಳಲ್ಲಿ 6 ಮಂದಿಯನ್ನು ಬಂಧಿಸಿದ್ದೇವೆ. ಸದ್ಯಕ್ಕೆ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಕಲುರಾಮ್‍ಗೆ ಬಲವಂತವಾಗಿ ಮೂತ್ರ ಕುಡಿಯುವ ವಿಡಿಯೊಗಳನ್ನು ಯುವರಾಜ್ ರಾಕೇಶ್ ಎಂಬಾತ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಈ ವಿಡಿಯೋವನ್ನು ಸಿಎಂ ಅಶೋಕ್ ಗೆಹ್ಲೋಟ್ ಮತ್ತು ರಾಜಸ್ಥಾನ ಪೊಲೀಸ್ , ಅನೇಕ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿರೋಹಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ತನಿಖೆ ಮಾಡುವಂತೆ ರಾಜಸ್ಥಾನ ಗೃಹ ಇಲಾಖೆ ಆದೇಶಿಸಿದೆ.

Leave a Reply

Your email address will not be published. Required fields are marked *