ʻಮಾನಸಿಕ, ದೈಹಿಕವಾಗಿ ಕೊಹ್ಲಿ ಪ್ರಬಲʼ

ಕೊಲಂಬೊ: ಕ್ರಿಕೆಟ್ ದಂತಕಥೆ, ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್ಮನ್ ಬಿಟ್ಟರೆ ವಿರಾಟ್ ಕೊಹ್ಲಿ ಎರಡನೇ ಶ್ರೇಷ್ಠ ಕ್ರಿಕೆಟರ್ ಆಗಬಹುದು. ಆ ಹಂತವನ್ನು ತಲುಪುವ ಸಂಪೂರ್ಣ ಸಾಮರ್ಥ್ಯ ಹಾಗೂ ಪರಿಶ್ರಮವನ್ನು ಅವರು ಹೊಂದಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಕುಮಾರ್ ಸಂಗಕ್ಕಾರ ಹೇಳಿದ್ದಾರೆ. 
ಆರ್‍ಕೆ ಶೋ’ನಲ್ಲಿ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ ಸಂಗಕ್ಕಾರ, ನಾನು ಆಟದ ಬಗ್ಗೆ ವಿರಾಟ್ ಉತ್ಸಾಹವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ಇನ್ನೂ ಮೈದಾನದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬಹುದು. ಕೊಹ್ಲಿ ದೈಹಿಕವಾಗಿ, ಮಾನಸಿಕವಾಗಿ ತುಂಬಾ ಪ್ರಬಲರಾಗಿದ್ದಾರೆ. ಹೀಗಾಗಿ ಡಾನ್ ಬ್ರಾಡ್ಮನ್ ನಂತರ ಎರಡನೇ ಶ್ರೇಷ್ಠ ಆಟಗಾರನಾಗಲು ಅವರಿಗೆ ಅವಕಾಶವಿದೆ. ಪ್ರಸ್ತುತ ಕ್ರಿಕೆಟ್‍ನಲ್ಲಿ ಅವರಂತಹ ಆಟಗಾರರು ಬಹಳ ಕಡಿಮೆ ಇದ್ದಾರೆ. ನನ್ನ ವೃತ್ತಿಜೀವನದಲ್ಲಿ ನಾನು ನೋಡಿದ ಎಲ್ಲ ಆಟಗಾರರಲ್ಲಿ ಕೊಹ್ಲಿ ಅತ್ಯುತ್ತಮ ಆಟಗಾರ. ಅವರಲ್ಲಿ ನಾನು ಹೆಚ್ಚು ಇಷ್ಟಪಡುವ ವಿಷಯವೆಂದರೆ ಕ್ರೀಡೆಗಳ ಬಗ್ಗೆ ಅವರ ಉತ್ಸಾಹ. ವಿರಾಟ್ ನಾಯಕನಾಗಿರಲಿ ಅಥವಾ ಆಟಗಾರನಾಗಿರಲಿ ತಂಡವನ್ನು ಗೆಲ್ಲಿಸುವ ಹೋರಾಟದ ವೇಳೆ ಭಾವನೆಗಳನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ. ಅವರು ಬ್ಯಾಟಿಂಗ್ ಸಮಯದಲ್ಲಿ ಹೆಚ್ಚು ಅಪಾಯಕಾರಿ ಹೊಡೆತಗಳನ್ನು ತೆಗೆದುಕೊಳ್ಳುವುದಿಲ್ಲ. ಹೀಗಿದ್ದರೂ ಅದು ಪರಿಣಾಮಕಾರಿಯಾಗಿ ಕಾಣುತ್ತದೆ ಎಂದು ಸಂಗಾಕ್ಕರ ಹೊಗಳಿದ್ದಾರೆ. ಸಂಗಕ್ಕಾರ ಅವರಿಗೂ ಮುನ್ನ ನ್ಯೂಜಿಲೆಂಡ್ ನಾಯಕ ಕೆನ್ ವಿಲಿಯಮ್ಸನ್ ಅವರು ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. “ವಿರಾಟ್ ವಿರುದ್ಧ ಆಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಚಿಕ್ಕ ವಯಸ್ಸಿನಲ್ಲಿಯೇ ಅವರನ್ನು ಭೇಟಿಯಾಗುವುದು ಹಾಗೂ ಕ್ರಿಕೆಟ್ ಜರ್ನಿಯನ್ನು ಹತ್ತಿರದಿಂದ ನೋಡುವುದು ನಿಜಕ್ಕೂ ಅದ್ಭುತವಾಗಿದೆ” ಎಂದಿದ್ದರು.

Leave a Reply

Your email address will not be published. Required fields are marked *