ಮಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಲಭ್ಯವಾಗುವ ಎರಡು ಸ್ಥಾನಗಳಿಗೆ ಭಾರೀ ಪೈಪೋಟಿ ನಡೆದಿದೆ. ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಕ್ಕೆ ಒಂದೊಂದು ಸ್ಥಾನ ಹಂಚಿಕೆ ಮಾಡಲಾಗುತ್ತಿದೆ. ಅಲ್ಪಸಂಖ್ಯಾತ ವಿಭಾಗದಲ್ಲಿ ನಿವೇದಿತಾ ಆಳ್ವಾ, ನಸೀರ್ ಅಹ್ಮದ್, ಜಬ್ಬಾರ್, ಐವನ್ ಡಿಸೋಜ ಟಿಕೆಟ್ ಗಾಗಿ ಲಾಬಿ ಮುಂದುವರಿಸಿದ್ದರೆ ಹಿಂದುಳಿದ ವಿಭಾಗದಲ್ಲಿ ಜಯಮಾಲ, ರಾಣಿ ಸತೀಶ್, ಕೃಪಾ ಅಮರ್ ಆಳ್ವಾ, ಜಯಮ್ಮ, ರತ್ನಪ್ರಭಾ, ಎಂ.ಸಿ.ವೇಣುಗೋಪಾಲ್, ಹೆಚ್.ಎಂ.ರೇವಣ್ಣ, ಎಂ.ಆರ್.ಸೀತಾರಾಮ್, ಮುದ್ದಹನುಮೇಗೌಡ, ಉಗ್ರಪ್ಪ, ನಟರಾಜ ಗೌಡ, ಮಾಲೂರು ನಾರಾಯಣ ಸ್ವಾಮಿ, ಮೋಹನ್ ಬಾಬು, ಮೊದಲಾದವರಿದ್ದಾರೆ. ಸದ್ಯ ಐವನ್ ವಿರುದ್ಧ ಕ್ರಿಶ್ಚಿಯನ್ ಸಮುದಾಯದಲ್ಲೇ ಅಪಸ್ವರ ಕೇಳಿಬಂದಿದ್ದು ಬೇರೆ ಯೋಗ್ಯ ಯುವನಾಯಕರಿಗೆ ಪಕ್ಷ ಮಣೆ ಹಾಕಲಿ ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಅಲ್ಪಸಂಖ್ಯಾತ ವಿಭಾಗದಲ್ಲಿ ಐವನ್ ಡಿಸೋಜಾ ಅವರು ಮಗದೊಮ್ಮೆ ಅವಕಾಶಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ಒತ್ತಡ ಹೇರುತ್ತಿದ್ದಾರೆ. ಐವನ್ ಡಿಸೋಜಾಗೆ ಮತ್ತೆ ಅವಕಾಶ ಕೊಡುವುದಕ್ಕೆ ಕ್ರಿಶ್ಚಿಯನ್ ಸಮುದಾಯದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಐವನ್ ಗೆ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ವಿಧಾನಸಭಾ ಪರಿಷತ್ ಸ್ಥಾನವನ್ನೂ ಆರು ವರ್ಷಗಳ ಹಿಂದೆ ಕಾಂಗ್ರೆಸ್ ನೀಡಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಖ್ಯ ಸಚೇತಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಟಿಕೆಟ್ ನೀಡುವುದಾದರೆ ಐವನ್ ಬದಲು ಹೊಸಬರಿಗೆ ಅವಕಾಶ ನೀಡಿ ಎಂದು ಕ್ರಿಶ್ಚಿಯನ್ ಸಮುದಾಯದವರು ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ. ಐವನ್ ಗಿಂತ ಒಳ್ಳೆಯ ಯುವ ನಾಯಕರು ಪಕ್ಷದಲ್ಲಿದ್ದು ಅವರನ್ನು ಯಾಕೆ ಬೆಳೆಸಬಾರದು ಎಂದು ಡಿಕೆಶಿ ಅವರಲ್ಲಿ ಮನವಿ ಮಾಡಿದೆ.