ಬಂಟ್ವಾಳ ಕಲ್ಲಿನ ಕೋರೆಯ ನೀರಿನಲ್ಲಿ ಮುಳುಗಿ ಬಾಲಕ ಸಾವು

ಬಂಟ್ವಾಳ: ಬಾರೆಕಾಡ್ ನ ಕಲ್ಲಿನ ಕೋರೆಯ ನೀರಿನಲ್ಲಿ‌ ಆಟವಾಡಲು ಇಳಿದ ಬಾಲಕನೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಸಂಜೆ ನಡೆದಿದೆ. ಬಂಟ್ವಾಳ ಕಸ್ಬಾ ಗ್ರಾಮದ ಬಾರೆಕಾಡ್ ಕ್ವಾಟ್ರಸ್ ನಿವಾಸಿ ಮಹಮ್ಮದ್ ಸಾದಿಕ್ ಅವರ ಪುತ್ರ ಮಹಮ್ಮದ್ ಸೌಹಾದ್ (11) ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ. ಸುತ್ತ ಬೇಲಿ ಹಾಕಲಾಗಿದ್ದ ಈ ಕೆಂಪು ಕಲ್ಲಿನ ಕೋರೆಯಲ್ಲಿ ಮಳೆಯಿಂದಾಗಿ ನೀರು ತುಂಬಿತ್ತೆನ್ನಲಾಗಿದೆ. ಇಬ್ಬರು ಸ್ನೇಹಿತರ ಜೊತೆ ಆಟವಾಡಲೆಂದು ಇಳಿದಾಗ ಸೌಹಾದ್ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ತಕ್ಷಣ ಇಬ್ಬರು ಸ್ನೇಹಿತರು ನೀಡಿದ ಮಾಹಿತಿಯನ್ವಯ ಸ್ಥಳೀಯರು ತಕ್ಷಣ ಧಾವಿಸಿ ಈತನನ್ನು ನೀರಿನಿಂದ ಮೇಲಕ್ಕೆತ್ತಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರಾದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕಳೆದ ಆರು ತಿಂಗಳಿನಿಂದ ಕೋರೆಯಲ್ಲಿ ಕೆಲಸಗಳು ಸ್ಥಗಿತಗೊಂಡ ಹಿನ್ನಲೆಯಲ್ಲಿ ಸುತ್ತ ಬೇಲಿ ಕೂಡ ಹಾಕಲಾಗಿತ್ತು ಎನ್ನಲಾಗಿದೆ.

Leave a Reply

Your email address will not be published. Required fields are marked *