ಮಾನವೀಯತೆಯನ್ನು ಅಣಕಿಸುವಂಥ ಟೋಯಿಂಗ್ ವ್ಯವಸ್ಥೆ ಬದಲಾಗಬೇಕಿದೆ

ಮಂಗಳೂರು: ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದೆ ಎಂಬ ಕಾರಣ ಮುಂದಿಟ್ಟು ಸಂಚಾರ ಪೊಲೀಸರು ವಾಹನಗಳನ್ನು ಟೋಯಿಂಗ್ ಮಾಡುವುದರಿಂದ ವಾಹನಗಳ ಮಾಲಕರಿಗೆ ತುಂಬಾ ಕಷ್ಟ ನಷ್ಟ ಉಂಟಾಗುತ್ತಿದ್ದು, ಪರ್ಯಾಯ ವಿಧಾನಗಳ ಮೂಲಕ ವಾಹನ ಮಾಲಕರಿಂದ ದಂಡ ಸಂಗ್ರಹಿಸುವ ಬಗ್ಗೆ ಯಾಕೆ ಚಿಂತಿಸಬಾರದು?
ತುರ್ತು ಅಗತ್ಯಕ್ಕಾಗಿ ಬಂದವರು, ದೂರದೂರಿನಿಂದ ಬಂದವರು ಗೊತ್ತಿದ್ದೋ, ಗೊತ್ತಿಲ್ಲದೆಯೋ ವಾಹನ ಗಳನ್ನು ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಹೋಗಿರುವಾಗ ಟೋಯಿಂಗ್ ಆದರೆ, ಅದರ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಕಷ್ಟ ಪಡುತ್ತಾರೆ. ಪೊಲೀಸರು ಟೋಯಿಂಗ್ ಸಂದರ್ಭದಲ್ಲಿ ನಿಯಮ ಗಳನ್ನೂ ಪಾಲಿಸುತ್ತಿಲ್ಲ ಎಂಬ ಆರೋಪವೂ ಇದೆ. ಟೋಯಿಂಗ್ ಮಾಡುವ ೫ ನಿಮಿಷ ಮೊದಲು ಧ್ವನಿ ವರ್ಧಕದ ಮೂಲಕ ತಿಳಿಸಬೇಕಾಗಿ ದ್ದರೂ, ಅದನ್ನು ಮಾಡದೆ ಕದ್ದುಮುಚ್ಚಿ ಕೆಲಸ ಮುಗಿಸುತ್ತಾರೆ. ಅವರಿಗೆ ಟಾರ್ಗೆಟ್ ರೀಚ್ ಮಾಡುವುದೇ ಮುಖ್ಯ. ಟೋಯಿಂಗ್ ಮಾಡುವ ಹೊತ್ತಿಗೆ ಮಾಲಕರು ಸ್ಥಳಕ್ಕೆ ಬಂದರೂ ವಾಹನವನ್ನು ಬಿಡುವುದಿಲ್ಲ. ಅವರಿಗೆ ಠಾಣೆಗೆ ಕೊಂಡೊಯ್ದು ಏನು ಮಹಾ ಸಾಧನೆ ಮಾಡಲಿಕ್ಕಿದೆ ಎಂಬ ಪ್ರಶ್ನೆ ಜನರಿಂದ ಕೇಳಿ ಬರುತ್ತಿದೆ.
ತುರ್ತು ಅಗತ್ಯದ ಬಗ್ಗೆ ಚಿಂತಿಸಿದ್ದಾರೆಯೇ?
: ವಾಹನಗಳನ್ನು ಟೋಯಿಂಗ್ ಮಾಡುವ ಮೊದಲು ನಮ್ಮ ಪೊಲೀಸರು ವಾಹನ ಮಾಲಕನ ಬಗ್ಗೆ ಆಲೋಚಿಸುವುದೇ ಇಲ್ಲ. ಟೋಯಿಂಗ್ ಮಾಡದೆ ಹೇಗೆ ದಂಡ ವಸೂಲಿ ಮಾಡಬ ಹುದು ಎಂಬ ಅವಕಾಶಗಳ ಬಗ್ಗೆಯೂ ಆಲೋಚಿಸು ವುದಿಲ್ಲ. ಪೊಲೀಸರು ಟೋಯಿಂಗ್ ಮಾಡಿದ ವಾಹನವು ತುರ್ತು ಆರೋಗ್ಯ ಅಗತ್ಯಕ್ಕಾಗಿ ಬಂದಿರು ವಂಥದ್ದಾಗಿರಬಹುದು, ಮನೆಮಂದಿಗೆ ತುರ್ತು ಔಷಧ ತೆಗೆದುಕೊಳ್ಳಲು ಬಂದವರಿರಬಹುದು. ಇವರು ವಾಪಸ್ ಮನೆಗೆ ಹೋಗಲು ವಾಹನ ಸಿಗದಿದ್ದರೆ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಟೋಯಿಂಗ್ ಮಾಡುವವರು ಆಲೋಚಿಸುತ್ತಾರೋ?
ದೂರದ ಊರಿನಿಂದ ತುರ್ತು ಅಗತ್ಯ ಕ್ಕಾಗಿ, ಪರೀಕ್ಷೆ ಅಥವಾ ಸಮಯ ನಿಗದಿಯಾಗಿರುವ ಕೆಲಸಕ್ಕೋ ಬಂದಿದ್ದು, ಒಂದು ನಿಮಿಷದಲ್ಲಿ ಬರುತ್ತೇವೆಂಬ ವಿಶ್ವಾಸದಲ್ಲಿ ರಸ್ತೆ ಬದಿ ವಾಹನ ನಿಲ್ಲಿಸಿ ಏನೋ ಒಂದು ತುರ್ತು ವಸ್ತು ಖರೀದಿಸಲು ಹೋದವರ ವಾಹ ನವೂ ಈ ರೀತಿ ಟೋಯಿಂಗ್ ಆದರೆ ಅವರ ಸ್ಥಿತಿ ಹೇಗಿದ್ದೀತು? ತಮ್ಮ ವಾಹನ ಎಲ್ಲಿದೆ? ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲೇ ಅವರು ದಿನಪೂರ್ತಿ ಸುತ್ತಾಡಬೇಕಾದೀತು. ಈ ಎಲ್ಲ ಕಾರಣಗಳನ್ನು ಮುಂದಿಟ್ಟು ಹೇಳುವು ದಾದರೆ, ಟೋಯಿಂಗ್ ಮಾಡುವ ಮೊದಲು ಚಿಂತಿಸಬೇಕು. ಗಂಟೆಗಟ್ಟಲೆ ಒಂದೇ ಕಡೆ ನಿಂತಿದ್ದರೆ ಬೇರೆ ವಿಷಯ. ಸಣ್ಣ ಅವಧಿಗೆ ನಿಲ್ಲಿಸಿದ್ದರೆ ಅವರಿಂದ ಟೋಯಿಂಗ್ ಹೊರತಾದ ಪರ್ಯಾಯ ದಾರಿಗಳ ಮೂಲಕ ದಂಡ ವಸೂಲು ಮಾಡಬೇಕು. ಬೇಕಿದ್ದರೆ ಟೋಯಿಂಗ್ ಮಾಡಿದಾಗ ಎಷ್ಟು ಮೊತ್ತದ ದಂಡ ವಿಧಿಸಲಾಗುತ್ತದೆಯೋ ಅಷ್ಟನ್ನೇ ವಸೂಲು ಮಾಡಲಿ. ಅದು ಬಿಟ್ಟು ಕೇವಲ ಟಾರ್ಗೆಟ್ ರೀಚ್ ಆಗಲು ನಿರ್ದಾಕ್ಷಿಣ್ಯವಾಗಿ ಹಾಗೂ ನಿಯಮಗಳನ್ನೂ ಪಾಲಿಸದೆ ಟೋಯಿಂಗ್ ಮಾಡುವುದು ಸರಿಯಲ್ಲ.
ನೋ ಪಾರ್ಕಿಂಗ್ ಉಲ್ಲಂಘನೆಗೆ ಸಮರ್ಥನೆ ಇಲ್ಲ
ಹಾಗೆಂದು ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ತೊಂದರೆ ಉಂಟು ಮಾಡುವುದು ಸರಿಯಲ್ಲ. ಇಂಥ ಕ್ರಮಗಳನ್ನು ಜಯಕಿರಣ ಯಾವತ್ತೂ ಸಮರ್ಥಿಸುವುದಿಲ್ಲ. ಆದರೆ ಅದರ ಹೆಸರಲ್ಲಿ ಮಾನವೀಯತೆ ಮರೆಯುವುದು ಖಂಡಿತಾ ಸರಿಯಲ್ಲ.

ಈ ವಿಷಯದ ಬಗ್ಗೆ ನಮ್ಮ ಪೊಲೀಸ್ ಆಯುಕ್ತ ಶಶಿಕುಮಾರ್ ಗಮನ ಹರಿಸಬೇಕಾಗಿದೆ. ಅವರು ಅಧಿಕಾರ ವಹಿಸಿಕೊಂಡ ಬಳಿಕ ಹಲವು ವಿಷಯಗಳಲ್ಲಿ ವ್ಯವಸ್ಥೆಗಳು ಸುಧಾರಣೆ ಕಂಡಿವೆ. ಆದ್ದರಿಂದ ಟೋಯಿಂಗ್ ಬಗ್ಗೆಯೂ ಗಮನ ಹರಿಸಿ, ಇದನ್ನು ಸುಧಾರಿಸಬೇಕು.
ಮಂಗಳೂರಿನಂಥ ಸರಿಯಾದ ಪಾರ್ಕಿಂಗ್ ವ್ಯವಸ್ಥೆಗಳಿಲ್ಲದ ನಗರಗಳಲ್ಲಿ ಟೋಯಿಂಗ್ ಮಾಡುವಾಗ ಮಾನವೀಯತೆ ಕಡೆಗೂ ಗಮನ ಹರಿಸಬೇಕಾಗಿದೆ. ಆಯುಕ್ತರು ಮನಸ್ಸು ಮಾಡಿದರೆ ವ್ಯವಸ್ಥೆ ಬದಲಾಗಲಿದೆ ಎಂಬ ವಿಶ್ವಾಸ ಸಾರ್ವಜನಿಕರಲ್ಲೂ ಇದೆ.
ಮಾನವೀಯತೆ ಪೊಲೀಸರಿಗೆ ಇದ್ದಿದ್ದರೆ ಇವೆಲ್ಲಾ ಆಗುತ್ತಿತ್ತೇ???
“ಜನಸ್ನೇಹಿ ಪೊಲೀಸ್” ಇದು ಠಾಣೆಯ ಗೋಡೆ ಕುರ್ಚಿ ಮೇಜಿಗೆ ಮಾತ್ರ ಸೀಮಿತವೇ???