ಎರಡು ವರ್ಷಗಳಿಂದ ಅಧ್ಯಕ್ಷರೇ ಇಲ್ಲದ ಕೋಟೆಕಾರು ಪಟ್ಟಣ ಪಂಚಾಯ್ತಿಗೆ ಅಧ್ಯಕ್ಷ ಭಾಗ್ಯ !

ಉಳ್ಳಾಲ: ಕಳೆದ ಎರಡು ವರ್ಷಗಳಿಂದ ಅಧ್ಯಕ್ಷರಿಲ್ಲದ ಕೋಟೆಕಾರು ಪಟ್ಟಣ ಪಂಚಾಯ್ತಿಗೆ ಇಂದು ಅಧ್ಯಕ್ಷರ ಭಾಗ್ಯ ದೊರೆತಿದೆ. ಬಿಜೆಪಿಯ ಜಯಶ್ರೀ ಫ್ರಫುಲ್ಲಾ ದಾಸ್ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಮೀಸಲಾತಿಗೆ ಅನುಸಾರವಾಗಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಇಲ್ಲದೇ ಎರಡು ವರ್ಷಗಳ ಕಾಲ ಉಪಾಧ್ಯಕ್ಷರ ಆಡಳಿತದಲ್ಲಿ ಪಟ್ಟಣ ಪಂಚಾಯಿತಿ ಮುಂದುವರಿದಿತ್ತು. ಭಾರತಿ ರಾಘವ ಗಟ್ಟಿ ಉಪಾಧ್ಯಕ್ಷರಾಗಿದ್ದರು. ಎರಡು ವರ್ಷಗಳ ಹಿಂದೆ ಪರಿಶಿಷ್ಟ ಪಂಗಡದ ಮಹಿಳೆ ಮೀಸಲಾತಿ ಬಂದಿರುವುದರಿಂದ ಬಿಜೆಪಿಯಿಂದ ಅಭ್ಯರ್ಥಿ ಇರಲಿಲ್ಲ. ಆದ್ದರಿಂದ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾತ್ರ ನಡೆದಿತ್ತು. ಬಿಜೆಪಿ ಬೆಂಬಲಿತ 11, ಕಾಂಗ್ರೆಸ್ -4 ಎಸ್ ಡಿಪಿಐ-1 ಹಾಗೂ ಸಿಪಿಎಂ ನ -1 ಅಭ್ಯರ್ಥಿ ಚುನಾಯಿತರಾಗಿದ್ದರು. ಇದೀಗ ಎರಡೂವರೆ ವರ್ಷಗಳ ಬಳಿಕ ಅಧ್ಯಕ್ಷರ ಆಯ್ಕೆ ನಡೆದರೂ, ಕೇವಲ ಆರು ತಿಂಗಳಿಗೆ ಮಾತ್ರ ಅಧಿಕಾರ ಇದ್ದು, ಬಳಿಕ ಅವಧಿ ಮುಗಿಯಲಿದೆ. ಆಯ್ಕೆ ಪ್ರಕ್ರಿಯೆ ಸಂದರ್ಭ ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕ್ಷೇತ್ರ ಬಿಜೆಪಿ ಮುಖಂಡರುಗಳಾದ ರವೀಂದ್ರ ಶೆಟ್ಟಿ ಉಳಿದೊಟ್ಟು,ಚಂದ್ರಹಾಸ್ ಪಂಡಿತ್ ಹೌಸ್, ಸಂತೋಷ್ ಬೋಳಿಯಾರು, ಸತೀಶ್ ಕುಂಪಲ, ಹೇಮಂತ್ ಶೆಟ್ಟಿ ದೇರಳಕಟ್ಟೆ, ಚಂದ್ರಶೇಖರ್ ಉಚ್ಚಿಲ್, ಯಶವಂತ ಅಮೀನ್, ಶೇಖರ್ ಕನೀರುತೋಟ, ಮುಂತಾದವರು ಉಪಸ್ಥಿತರಿದ್ದರು.
