ತೋಕೂರು ಪಾದೂರು ಐಎಸ್ಪಿಆರ್ ಪೈಪ್ಲೈನ್ನಲ್ಲಿ ಕಚ್ಚಾ ತೈಲ ಸೋರಿಕೆ

ಸುರತ್ಕಲ್ : ಮಂಗಳೂರಿನ ತೋಕೂರಿನಿಂದ ಉಡುಪಿಯ ಪಾದೂರುವರೆಗೆ ಹಲವಾರು ಗ್ರಾಮಗಳ ಮೂಲಕ ಅಳವಡಿಸಲಾದ ಐಎಸ್ಪಿ ಆರ್ಎಲ್ ಕಚ್ಚಾ ತೈಲ ಕೊಳವೆ ಮಾರ್ಗದಲ್ಲಿ ಸೋರಿಕೆ ಉಂಟಾಗಿದ್ದು ಕುತ್ತೆತ್ತೂರಿನ ಕೇಂಞ ಪರಿಸರದಲ್ಲಿ ಆಯಿಲ್ ಮಿಶ್ರಿತ ನೀರು ಹರಿಯುತ್ತಿದೆ.

ಕಪ್ಪು ಬಣ್ಣದ ತೈಲ ಮಿಶ್ರಿತ ನೀರು ಹರಿಯುತ್ತಿರುವುದನ್ನು ಕಂಡ ಸ್ಥಳೀಯರು ಐಎಸ್ಪಿಆರ್ಎಲ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಐಎಸ್ಪಿಆರ್ಎಲ್ ಸಿಬ್ಬಂದಿ ‘ಇದು ಕ್ರೂಡ್ ಆಯಿಲ್ ಅಲ್ಲ ಸ್ಥಳೀಯರು ಯಂತ್ರದ ಮೂಲಕ ಹುಲ್ಲು ಕಟಾವು ಮಾಡಿದ್ದರಿಂದ ನೀರಿನಲ್ಲಿ ಎಣ್ಣೆ ಮಿಶ್ರವಾಗಿದೆ ಎಂಬ ಬಾಲಿಶವಾದ ಹೇಳಿಕೆಯನ್ನು ನೀಡಿ ಸ್ಥಳೀಯರನ್ನು ಏಮಾರಿಸುವ ಯತ್ನ ಮಾಡಿದ್ದಾರೆ ಎಂದು ದೂರಲಾಗಿದೆ.
ಕಚ್ಚಾ ತೈಲ ಸೋರಿಕೆಯಾದ ಪ್ರದೇಶವು ನೀರಿನ ಮೂಲದ ಪ್ರದೇಶವಾಗಿದ್ದು ಇಲ್ಲಿಂದ ನೀರು ಕುತ್ತೆತ್ತೂರು, ಸೂರಿಂಜೆ ಮೂಲಕ ಹರಿದು ನಂದಿನಿ ನದಿಯನ್ನು ಸೇರುತ್ತದೆ. ಆಯಕಟ್ಟಿನ ಪ್ರದೇಶದಲ್ಲಿ ನೀರಿಗೆ ಎಣ್ಣೆ ಮಿಶ್ರವಾಗುತ್ತಿದ್ದು ಇದರಿಂದ ಹಲವಾರು ಗ್ರಾಮಗಳ ಕುಡಿಯುವ ನೀರಿಗೆ ಕ್ರೂಡ್ ಆಯಿಲ್ ಬೆರೆಯುವ ಭೀತಿ ಎದುರಾಗಿದೆ. ಕೃಷಿಗೆ ಆತಂಕ ಎದುರಾಗಿದೆ.
ಈಗ ಕಚ್ಚಾ ತೈಲ ಸೋರಿಕೆಯಾಗುತ್ತಿದೆ ಎಂದು ಹೇಳಲಾಗುವ ಪರಿಸರದಲ್ಲಿ ಕೊಳವೆ ಅಳವಡಿಸುವಾಗ ಬಂಡೆ ಕಲ್ಲುಗಳಿಂದ ಅಡ್ಡಿ ಉಂಟಾದ ಕಾರಣ ನಿಗದಿಪಡಿಸಿದ ಆಳದಲ್ಲಿ ಕೊಳವೆಯನ್ನು ಅಳವಡಿಸದೆ ಮೇಲ್ಮಟ್ಟದಲ್ಲಿ ಅಳವಡಿಕೆ ಮಾಡಲಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಅವೈಜ್ಞಾನಿಕ ಕಳಪೆ ಕಾಮಗಾರಿಗಳನ್ನು ಸ್ಥಳೀಯರು ಪ್ರತಿಭಟಿಸಿದ್ದರು. ಮಾತ್ರವಲ್ಲದೆ ಐಎಸ್ಆರ್ಪಿಎಲ್ ಒತ್ತಾಯಿಸಿದ್ದರೂ ಅಂತಿಮ ಒಪ್ಪಿಗೆ ಪತ್ರವನ್ನು ನೀಡದೆ ಕಾಮಗಾರಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈಗ ಈ ಭಾಗದ ರೈತರ ಶಂಕೆ ನಿಜ ಎಂಬುದಕ್ಕೆ ಕಚ್ಚಾತೈಲ ಸೋರಿಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನವಮಂಗಳೂರು ಬಂದರಿನಿಂದ ಉಡುಪಿಯ ಪಾದೂರಿಗೆ ಕಚ್ಚಾ ತೈಲವನ್ನು ಸಾಗಿಸಿ ಅಲ್ಲಿನ ಬೃಹತ್ ಟಾಂಕಿಗಳಲ್ಲಿ ಸಂಗ್ರಹ ಮಾಡಲು ಮಂಗಳೂರು ಮತ್ತು ಉಡುಪಿ ಜಿಲ್ಲೆಯ 21 ಗ್ರಾಮಗಳಲ್ಲಿ ಈ ಕೊಳವೆ ಹಾದು ಹೋಗಿದೆ.
