`ಟಿಕ್ ಟಾಕ್’ ಗೆಳೆಯನ ಕಿರುಕುಳ: ಕಿರುತೆರೆ ನಟಿ ಆತ್ಮಹತ್ಯೆ

ಹೈದರಾಬಾದ್: ಟಿಕ್ ಟಾಕ್ ಮೂಲಕ ಪರಿಚಯ ಬೆಳೆಸಿದ್ದ ಗೆಳೆಯನ ಕಿರುಕುಳ ತಾಳಲಾರದೆ ತೆಲುಗು ಕಿರುತೆರೆ ಲೋಕದ ಜನಪ್ರಿಯ ನಟಿ ಶ್ರಾವಣಿ ಕೊಂಡಪಲ್ಲಿ ನಿನ್ನೆ ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮನಸು ಮಮತಾ, ಮೌನರಾಗಂ ಮುಂತಾದ ಸೀರಿಯಲ್ ಗಳ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಶ್ರಾವಣಿ ಸಾವಿಗೆ ದೇವರಾಜು ರೆಡ್ಡಿಯೇ ಕಾರಣ ಎಂದು ಶ್ರಾವಂತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಟಿಕ್ ಟಾಕ್ ಗೆಳೆಯನಾಗಿದ್ದ ದೇವರಾಜು,
ಕೇಳಿದ್ದಷ್ಟು ಹಣ ಕೊಡು ಇಲ್ಲದಿದ್ದರೆ ನಮ್ಮಿಬ್ಬರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಬಿಡುತ್ತೇನೆ’ ಎಂದು ಶ್ರಾವಣಿಗೆ ದೇವರಾಜು ರೆಡ್ಡಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹೈದರಾಬಾದಿನ ಎಸ್ಸಾರ್ ನಗರ ವ್ಯಾಪ್ತಿಯ ಮಥುರಾನಗರ ವಸತಿ ಕಟ್ಟಡದಲ್ಲಿ ಎರಡನೇ ಮಹಡಿಯಲ್ಲಿ ಶ್ರಾವಣಿ ವಾಸಿಸುತ್ತಿದ್ದರು. ದೇವರಾಜು ರೆಡ್ಡಿ ಆಕೆ ಮನೆಗೆ ಬಂದು ಹೋಗಿದ್ದನ್ನು ನೋಡಿದ್ದಾಗಿ ನೆರೆಮನೆಯವರು ಹೇಳಿಕೆ ನೀಡಿದ್ದಾರೆ. ದೇವರಾಜು ರೆಡ್ಡಿ ಸದ್ಯ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಘಟನೆ ನಡೆದ ರಾತ್ರಿ ದೇವರಾಜು ರೆಡ್ಡಿಗೆ ಶ್ರಾವಣಿ ಹಣ ನೀಡಿರುವ ಬಗ್ಗೆ ಮನೆಯಲ್ಲಿ ಜಗಳವಾಗಿದೆ. ಶ್ರಾವಣಿಯನ್ನು ಅವರ ತಾಯಿ ಹಾಗೂ ಸೋದರ ಚೆನ್ನಾಗಿ ಬೈದಿದ್ದಾರೆ. ಇದೇ ನೋವಿನಲ್ಲಿ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ ಶ್ರಾವಣಿ ತಡ ರಾತ್ರಿ ಟಾಯ್ಲೆಟ್ ಗೆ ಹೋಗಿ ಬಂದ ಸದ್ದು ಕೇಳಿಸಿದೆ. ನಂತರ ಯಾಕೋ ಅನುಮಾನ ಬಂದು ಬಾಗಿಲು ಬಡಿದಾಗ ಬಾಗಿಲು ಒಳಗಿನಿಂದ ಹಾಕಿಕೊಂಡಿರಲಾಗಿರುತ್ತದೆ. ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶ್ರಾವಣಿ ಪತ್ತೆಯಾಗುತ್ತಾಳೆ. ಪೊಲೀಸರು ಕ್ರಮ ಕೈಗೊಂಡಿರಲಿಲ್ಲ ದೇವರಾಜು ರೆಡ್ಡಿ ಬೆದರಿಕೆ ಬಗ್ಗೆ ಜೂನ್ 22ರಂದು ಶ್ರಾವಣಿ ಪೊಲೀಸರಿಗೆ ದೂರು ನೀಡಿದ್ದಳು. ಆದರೆ, ದೂರಿನಲ್ಲಿ ಮಾನಸಿಕ ಕಿರುಕುಳ ಎಂದಷ್ಟೆ ಉಲ್ಲೇಖಿಸಿದ್ದಳು, ಮದುವೆಯಾಗುವುದಾಗಿ ಮೋಸ ಮಾಡಿದ್ದನ್ನು ಹೇಳಿದ್ದಳು ಆದರೆ, ಆತ ಯಾವ ರೀತಿ ಬೆದರಿಕೆ ಒಡ್ಡಿದ್ದ ಎಂಬುದನ್ನು ತಿಳಿಸಿರಲಿಲ್ಲ. ಇಬ್ಬರ ಖಾಸಗಿ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುತ್ತೇನೆ ಎಂದು ಬೆದರಿಸಿದ್ದರ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.